ನವದೆಹಲಿ : ಖರ್ಗೆ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ನಿಮ್ಹಾನ್ಸ್ಗೆ ಕಳಿಸೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಂಗಳೂರಲ್ಲಿ ನಿಮಾನ್ಸ್ ಆಸ್ಪತ್ರೆ ಉತ್ತಮವಾಗಿದೆ. ಅದು ಫರ್ಸ್ಟ್ ಕ್ಲಾಸ್ ಆಗಿದೆ. ಅಲ್ಲಿಗೆ ಆರಗ ಜ್ಞಾನೇಂದ್ರ ಅವರನ್ನು ಕಳುಹಿಸೋಣ ಎಂದಿದ್ದಾರೆ.
ಮಂತ್ರಿಗಳು ಸೇರಿ ಕರ್ನಾಟಕದ ಸುಮಾರು 50 ಮಂದಿ ನಾಯಕರ ಸಭೆಯನ್ನು ವರಿಷ್ಠರು ಕರೆದಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು ಎಲ್ಲ ರಾಜ್ಯದ ಮುಖಂಡರ ಸಭೆ ನಡೆಸುತ್ತಿದ್ದಾರೆ. ಕರ್ನಾಟಕದ ಸಭೆ ವಿಶೇಷವೇನಲ್ಲ ಎಂದು ತಿಳಿಸಿದ್ದಾರೆ.
ಸಚಿವರ ಪ್ರತ್ಯೇಕ ಸಭೆ ನಡೆಯಲಿದೆ
ಹಿಂದೆಯೇ ಬೆಂಗಳೂರಲ್ಲಿ ಸಭೆ ನಡೆಯಬೇಕಿತ್ತು. ರಾಹುಲ್ ಗಾಂಧಿ ಅವರ ಜತೆ ಎಲ್ಲ ಮಂತ್ರಿಗಳ ಫೋಟೋ ಸೆಷನ್ ಕೂಡ ಇತ್ತು. ಉಮಾನ್ ಚಾಂಡಿ ಅವರ ನಿಧನದ ಹಿನ್ನೆಲೆಯಲ್ಲಿ ಆ ಸಭೆ ರದ್ದಾಗಿತ್ತು. ಅದು ಈಗ ದೆಹಲಿಯಲ್ಲಿ ನಡೆಯುತ್ತಿದೆ. ಸಚಿವರ ಪ್ರತ್ಯೇಕ ಸಭೆ ಕೂಡ ನಡೆಯಲಿದೆ. ಲೋಕಸಭಾ ಚುನಾವಣೆ, ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು ವಾಹನ ಸಂಚಾರ ದಟ್ಟಣೆ ನಿವಾರಣೆಗೆ ಸುರಂಗ ರಸ್ತೆ, ಮೇಲು ಸೇತುವೆ ರಸ್ತೆ ನಿರ್ಮಾಣ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಚರ್ಚೆ ಮಾಡುವುದಾಗಿ ಇದೇ ವೇಳೆ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.