Friday, November 22, 2024

ಬಹುರಾಷ್ಟ್ರೀಯ ಕಂಪೆನಿ ಕೀಟನಾಶಕಕ್ಕೆ 20 ಲಕ್ಷ ಟೊಮೊಟೊ ಬೆಳೆ ನಾಶ: ರೈತ ಕಂಗಾಲು!

ದೊಡ್ಡಬಳ್ಳಾಪುರ: ಚಿನ್ನದಂತೆ ಟೊಮೆಟೊ‌ ಬೆಲೆ ಉತ್ತುಂಗಕ್ಕೇರಿರುವ ಹೊತ್ತಿನಲ್ಲಿಯೇ ಇಲ್ಲೊಬ್ಬ ರೈತ, ಉಚಿತ ಕೀಟನಾಶಕದ ಆಮಿಷಕ್ಕೆ ಒಳಗಾಗಿ ‘ಪ್ರಯೋಗ ಪಶು’ ವಿನಂತಾಗಿದ್ದು ಟೊಮೆಟೊ ಬೆಳೆ ಸಂಪೂರ್ಣ ಒಣಗಿ ಹೋಗಿರುವ ಘಟನೆ ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ನಡೆದಿದೆ.

ರೈತ ಜಿ.ಟಿ.ಗಿಡ್ಡೇಗೌಡ ಅವರು ತಮ್ಮ‌ ಮನೆಯ ಹಿಂದಿನ ಒಂದು ಎಕರೆ ಜಾಗದಲ್ಲಿ 2 ಲಕ್ಷ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದರು. ಹೂವು, ಕಾಯಿಯೊಂದಿಗೆ ಗಿಡಗಳು ನಳನಳಿಸುತ್ತಿದ್ದವು. ಇಂತಹ ಸಮಯದಲ್ಲಿ ಟಾಟಾ ರ್ಯಾಲೀಸ್ ಎಂಬ ಹೆಸರಿನ‌ ಕಂಪೆನಿಯ  ವಕ್ರದೃಷ್ಠಿ ಟೊಮೆಟೊ‌ ಮೇಲೆ ಬಿದ್ದಿದೆ.

ಕಂಪೆನಿ ಪ್ರತಿನಿಧಿಗಳು ಬಂದು ಗಿಡ್ಡೇಗೌಡರಿಗೆ ಇಲ್ಲಸಲ್ಲದ ಕಥೆ ಹೇಳಿ, ಉಚಿತ ಕೀಟನಾಶಕದ ಆಮಿಷವೊಡ್ಡಿದ್ದಾರೆ. ಬೆಲೆ ಗಗನಕಗಕೇರಿದ್ದು, ಇನ್ನಷ್ಟು ಉತ್ತಮ‌ ಫಸಲು ಬರುವ ಆಸೆಕಂಗಳಿಂದ ರೈತ ಗಿಡ್ಡೇಗೌಡರು ಒಪ್ಪಿಗೆ ಕೊಟ್ಟಿದ್ದಾರೆ. ಒಂದು ಎಕರೆಯಲ್ಲಿ ಅರ್ಧ ಎಕರೆ ಕಂಪೆನಿಯ ಹೊಸ ಔಷಧ ಪ್ರಯೋಗಕ್ಕೆ ಕೊಟ್ಟಿದ್ದಾರೆ. ಉಳಿದರ್ಧ ತಾವೇ ಹೊಸಗಿನಿಂದ ಔಷಧಿ ತಂದು ನಿರ್ವಹಣೆ ಮಾಡುತ್ತಿದ್ದರು.

ಕಳೆದ 20 ದಿನಗಳ ಹಿಂದೆ ಕಂಪೆನಿ ಪ್ರತಿನಿಧಿಗಳು ಅರ್ಧ ಎಕರೆಗೆ 30 ಕ್ಯಾನ್ ಔಷಧಿ ಮಿಶ್ರಣ ಮಾಡಿಕೊಟ್ಟು ಖುದ್ದು ತಾವೇ ನಿಂತು ಸಿಂಪಡಣೆ ಮಾಡಿಸಿದ್ದಾರೆ. ತಲಾ ಮೂರು ಸಾಲಿಗೆ ಒಂದು ಕ್ಯಾನ್ ಔಷಧ ಸಿಂಪಡಿಸಬೇಕು ಎಂದು ಟೇಪ್ ಕಟ್ಟಿ ಗುರುತು ಮಾಡಿದ್ದರು. ಇದಾದ ಒಂದು ವಾರದ ಬಳಿಕ ಗಿಡ ಒಣಗಲಾರಂಭಿಸಿತು. ಕಾಯಿ ಕೊಳೆಯುತ್ತಿತ್ತು. ಇದನ್ನು‌ ಗಮನಿಸಿದ ರೈತ ಗಿಡ್ಡೇಗೌಡ ಅವರು ಕಂಪೆನಿ ಪ್ರತಿನಿಧಿಗಳಿಗೆ ಕರೆ‌ಮಾಡಿ ಹೇಳಿದರಲ್ಲದೇ ವಾಟ್ಸ್ ಆ್ಯಪ್ ನಲ್ಲಿ ಫೋಟೊ ಕೂಡ ಕಳುಹಿಸಿದ್ದಾರೆ.

ಕಂಪೆನಿ‌ ಮ್ಯಾನೇಜರ್ ಗಮನಕ್ಕೆ ತರುತ್ತೇವೆ. ಇಂದು, ನಾಳೆ ಎಂದುಕೊಂಡೇ 20 ದಿನ ವ್ಯರ್ಥ ಮಾಡಿದರು. ಅಷ್ಟೊತ್ತಿಗಾಗಲೇ ಗಿಡ್ಡೇಗೌಡರು ನಿವರ್ಹಣೆ ಮಾಡುತ್ತಿದ್ದ ಅರ್ಧ ಎಕರೆ ಕೂಡ ಕೊನೆಯಾಗುತ್ತಾ ಬಂದಿತ್ತು. ಸೋಮವಾರ ಕಂಪೆನಿ ಅಧಿಕಾರಿಗಳಿಗೆ ಕರೆ ಮಾಡಿದಾಗ ನಮ್ಮದೇನೂ ತಪ್ಪಿಲ್ಲ, ನೀವೇ ಕಳೆನಾಶಕ ಸಿಂಪಡಿಸಿರಬಹುದೆಂದು ಹೇಳಿದರಲ್ಲದೇ ಕಂಪೆನಿ ಮೇಲೆ ಬೇಕಾದರೆ ಕೇಸ್ ಹಾಕಿಕೊಳ್ಳಿ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ.

ರೈತ ಜಿ.ಟಿ.ಗಿಡ್ಡೇಗೌಡ ಅವರು ತೋಟಗಾರಿಕೆ ಇಲಾಖೆಗೆ ದೂರು ನೀಡಿದ್ದು, ಅಧಿಕಾರಿಗಳು ಪರಿಶೀಲಿಸಿದ್ದಾರೆ. ಕಂಪೆನಿ‌ ಸಿಂಪಡಿಸಿರುವ ಔಷಧ ಹಾಗೂ ಬೆಳೆಯ ನಮೂನೆಯನ್ನು ವಿಶ್ಲೇಷಣೆ ಮಾಡಿ‌ ವರದಿ‌ ಕೊಡಲು ಕೃಷಿ ವಿಜ್ಞಾನ ಕೇಂದ್ರಕ್ಕೆ ಕಳುಹಿಸಲಾಗಿದೆ.

ರೈತ ಜಿ.ಟಿ. ಗಿಡ್ಡೇಗೌಡ ಮಾತನಾಡಿ, ನಾನು ನಿರ್ವಹಣೆ ಮಾಡಿದ ಅರ್ಧ ಎಕರೆಯಲ್ಲಿ ಉತ್ತಮ ಫಸಲು ಬಂದು 12 ಲಕ್ಷ ಲಾಭ ಗಳಿಸಿದ್ದೇನೆ. ಆದರೆ, ಕಂಪೆನಿಯವರು ಸಿಂಪಡಿಸಿದ ಕೀಟನಾಶಕದಿಂದ ಉಳಿದ ಅರ್ಧ ಎಕರೆ ಸಂಪೂರ್ಣ ಒಣಗಿತು. ಅದರಲ್ಲೂ ಕನಿಷ್ಠ 15 ಬರುವ ನಿರೀಕ್ಷೆ ಇತ್ತು. ಆದರೆ ಕಂಪೆನಿಯವರ ಪ್ರಯೋಗಕ್ಕೆ ಇಡೀ ತೋಟ ಬಲಿಯಾಯಿತು ಎಂದು ಅಳಲು ತೋಡಿಕೊಂಡರು.

ರೈತ ಮುಖಂಡ ವಸಂತಕುಮಾರ್ ಮಾತನಾಡಿ, ಟಾಟಾ ರ್ಯಾಲೀಸ್ ಎಂಬ ಬಹುರಾಷ್ಟ್ರೀಯ ಕಂಪೆನಿಯು ರೈತರ ತೋಟಗಳಲ್ಲಿ ತನ್ನ ಔಷಧ ಪ್ರಯೋಗ ಮಾಡುತ್ತಿರುವುದು ಸರಿಯಲ್ಲ. 20 ದಿನಗಳಿಂದ ಪರಿಹಾರ ಕೊಡುವ ಭರವಸೆ ನೀಡುತ್ತಿದ್ದವರು ಈಗ ನೀವೇ ಕಳೆ ಔಷಧ ಹೊಡೆದಿದ್ದೀರಿ ಅನ್ನುತ್ತಿದ್ದಾರೆ. ಯಾರಾದರೂ ತಮ್ಮ ಮಕ್ಕಳಿಗೆ ತಾವೇ ವಿಷ ಉಣಿಸುತ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ಬಹುರಾಷ್ಟ್ರೀಯ ಕಂಪನಿ ವಿರುದ್ಧ ಕ್ರಮ ಜರುಗಿಸಬೇಕು.‌ ರೈತರಿಗೆ ಆಗಿರುವ ನಷ್ಟ ವಸೂಲಿ‌ ಮಾಡಬೇಕು ಎಂದು ಒತ್ತಾಯಿಸಿದರು. ಈ ಕುರಿತು‌ ಸ್ಪಷ್ಟೀಕರಣ ಪಡೆಯಲು ಕಂಪೆನಿ ಪ್ರತಿನಿಧಿಗಳಿಗೆ ಕರೆ‌ ಮಾಡಿದರೂ ಸ್ವೀಕರಿಸಲಿಲ್ಲ. ‌

RELATED ARTICLES

Related Articles

TRENDING ARTICLES