ಚಿತ್ರದುರ್ಗ : ಕಲುಷಿತ ನೀರು ಸೇವಿಸಿ ಮಹಿಳೆ ಮೃತಪಟ್ಟಿರುವ ಘಟನೆ ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ನಡೆದಿದೆ.
ಮಂಜುಳಾ(21) ಸಾವನ್ನಪ್ಪಿರುವ ಮಹಿಳೆ. ಚಿಕಿತ್ಸೆ ಫಲಿಸದೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಗರಸಭೆ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನೀರಿನ ಟ್ಯಾಂಕ್ ತೊಳೆಯುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ, ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
ಜಿಲ್ಲಾಧಿಕಾರಿ ದಿವ್ಯಪ್ರಭು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿದ ಅವರು, 20ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ಅವರಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತೀವ್ರ ಅಸ್ವಸ್ಥರಾಗಿದ್ದ ಐವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.
ಮಂಜುಳಾ ಸಾವಿನ ಕಾರಣ ಏನೆಂಬುದು ಪರೀಕ್ಷೆ ಬಳಿಕ ತಿಳಿಯಲಿದೆ. ಕುಡಿಯುವ ನೀರು ಸರಬರಾಜು ಟ್ಯಾಂಕ್ ಗೆ ವಿಷಪ್ರಾಶನ ಶಂಕೆ ಇರುವ ವಿಚಾರಕ್ಕೆ ನೀರಿನ ಪರೀಕ್ಷಾ ವರದಿ ಬಳಿಕ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತೆ ಎಂದು ಹೇಳಿದರು.