ಹಾವೇರಿ : ನಿರಂತರ ಮಳೆಯಿಂದ ಸುಮಾರು ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಟೊಮೆಟೊ ನಾಶವಾಗಿರುಗ ಘಟನೆ ಹಾವೇರಿ ತಾಲೂಕು ದೇವಗಿರಿ ಗ್ರಾಮದಲ್ಲಿ ನಡೆದಿದೆ.
ಭಾರಿ ಮಳೆಯಿಂದ ದೇವಗಿರಿ ಬಳಿಯ ವರದಾ ನದಿ ಉಕ್ಕಿ ಹರಿದಿದೆ. ಪರಿಣಾಮ, ಗ್ರಾಮದ ರೈತ ದುರಗಪ್ಪ ಹೆಡಿಗ್ಗೊಂಡ ಅವರು ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದ ಟೊಮೆಟೊ ಬೆಳೆಗೆ ನೀರು ನುಗ್ಗಿದೆ. ಸುಮಾರು ಎರಡೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆದ ಟೊಮೆಟೊ ಬೆಳೆ ನದಿಯ ಪ್ರವಾಹಕ್ಕೆ ತುತ್ತಾಗಿ ಹಾಳಾಗಿದೆ.
ಸ್ವಂತ ಜಮೀನು ಇಲ್ಲದ ರೈತ ದುರಗಪ್ಪ ಹೆಡಿಗ್ಗೊಂಡ ಅವರು ಎಕರೆಗೆ 15 ಸಾವಿರ ರೂಪಾಯಿಗಳಂತೆ ನಾಲ್ಕು ಎಕರೆ ನೀರಾವರಿ ಜಮೀನು ಲಾವಣಿ ಹಾಕಿಕೊಂಡು ಕೃಷಿ ಮಾಡಿದ್ದರು. ಟೊಮೆಟೊ ದರ ಏರಿಕೆ ನಿರೀಕ್ಷೆಯಲ್ಲಿ ನಾಲ್ಕು ಎಕರೆ ಹೊಲದಲ್ಲಿ ಟೊಮೆಟೊ ಬೆಳೆದಿದ್ದರು.
ಸಾವಿರಾರು ರೂಪಾಯಿ ವ್ಯಯಿಸಿ ಟೊಮೆಟೊ ಸಸಿ ತಂದು ನಾಟಿ ಮಾಡಿದ್ದರು. ಬಳಿಕ ಕಂಬ ನಿಲ್ಲಿಸೋದು, ತಂತಿ ಕಟ್ಟೋದು, ಔಷಧ ಸಿಂಪರಣೆ, ಗೊಬ್ಬರ ಹಾಕುವುದು ಹೀಗೆ ಪ್ರತಿದಿನ ಸುಮಾರು 15 ಜನ ಆಳುಗಳಂತೆ 12 ದಿನ ಕೆಲಸ ಮಾಡಿ, ಒಟ್ಟು 2.50 ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಬೆಳೆ ನಾಶದಿಂದ ರೈತ ದುರಗಪ್ಪ ಕಂಗಾಲಾಗಿದ್ದಾರೆ.