ಬೆಂಗಳೂರು : 200 ಯೂನಿಟ್ ಮಿತಿಯಲ್ಲಿ ವಿದ್ಯುತ್ ಬಳಕೆ ಮಾಡಿರುವ ಎಲ್ಲಾ ಫಲಾನುಭವಿಗಳಿಗೂ ಉಚಿತವಾಗಿ ವಿದ್ಯುತ್ ಸೇವೆ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಕೆ ಜಾರ್ಜ್ ತಿಳಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಜನತೆಯ ಅನುಕೂಲಕ್ಕಾಗಿ ಗೃಹಜ್ಯೋತಿ ಯೋಜನೆಯಡಿ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದ್ದು, ಈ ಯೋಜನೆಗೆ ಜುಲೈ 27 ರ ಒಳಗೆ ನೊಂದಾಯಿಸಿಕೊಂಡ ಎಲ್ಲಾ ಫಲಾನುಭವಿಗಳಿಗೂ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುವುದು ಎಂದರು. ಈಗಾಗಲೇ ಉಚಿತ ವಿದ್ಯುತ್ ಯೋಜನೆಗೆ ರಾಜ್ಯಾದ್ಯಂತ 1.42 ಕೋಟಿ ಜನತೆ ನೊಂದಾಯಿಸಿಕೊಂಡಿದ್ದಾರೆ.
ಗೃಹಜ್ಯೋತಿ ಯೋಜನೆಯನ್ನು ಇದೇ ಅಗಸ್ಟ್ 5 ರಂದು ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕೃತವಾಗಿ ಉಧ್ಘಾಟನೆ ಮಾಡಲಿದ್ದಾರೆ, ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ , ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗಿಯಾಗಲಿದ್ದಾರೆ. ಆಗಸ್ಟ್ 5 ರಂದು ಉದ್ಘಾಟನೆಯಾದ ಬಳಿಕ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಚಾಲನೆಗೆ ಬರಲಿದೆ ಎಂದರು.
ಇದೇ ವೇಳೆ ಈ ಹಿಂದೆ ಬಡಜನತೆಗೆ ನೀಡಲಾಗುತ್ತಿದ್ದ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿಯ ಯೋಜನೆಗಳನ್ನು ಗೃಹಜ್ಯೋತಿ ಯೋಜನೆಯ ಅಡಿ ವಿಲೀನವಾಗುವುದು, 200 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಿರುವ ಎಲ್ಲಾ ಅರ್ಹತೆ ಮಿತಿಯಲ್ಲಿರುವ ಫಲಾನುಭವಿಗಳು ಉಚಿತ ವಿದ್ಯುತ್ ಪಡೆಯಲಿದ್ದಾರೆ ಎಂದರು.
ರಾಜ್ಯದಲ್ಲಿ 2.16 ಕೋಟಿ ಆರ್ ಆರ್ ನೋಂದಣಿ ಇದ್ದರೆ 2.14 ಕೋಟಿ ಮನೆಗಳಲ್ಲಿ 200 ಯೂನಿಟ್ ಗಳಿಗಿಂತಲೂ ಕಡಿಮೆ ಯೂನಿಟ್ಗಳ ವಿದ್ಯುತ್ ಬಳಸುತ್ತಿದ್ದಾರೆ, ಕೆಲವೊಬ್ಬರು ಸ್ವಯಂಚಾಲಿತವಾಗಿ ಯೋಜನೆ ತಗೊಳ್ಳುತ್ತಿಲ್ಲ ಹಾಗೇ ಕೆಲವೊಬ್ಬರು ಹಲವು ಮನೆಗಳು ಇರುವುದರಿಂದ ಅರ್ಜಿ ಸಲ್ಲಿಸುತ್ತಿಲ್ಲ. ಇನ್ನೂ ಈ ಯೋಜನೆಗೆ ಡೆಡ್ ಲೈನ್ ಇಲ್ಲದಿರೋ ಕಾರಣ ನೋಂದಣಿ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿದೆ.
200 ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡುವವರು ಗೃಹ ಜ್ಯೋತಿ ಗೆ ಅರ್ಜಿ ಸಲ್ಲಿಸಿದರೇ ಅವರು ಅರ್ಜಿ ತಿರಸ್ಕಾರಗೊಳ್ಳಲಿದೆ . 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸುತ್ತಿರುವ, ಅರ್ಹತೆಯ ಮಿತಿಯಲ್ಲಿರುವ ಎಲ್ಲಾ ಫಲಾನುಭವಿಗಳಿಗೂ ಉಚಿತ ವಿದ್ಯುತ್ ಸಿಗಲಿದೆ ಎಂದು ಅವರು ಹೇಳಿದರು.