ಬೆಂಗಳೂರು : ತಿರುಪತಿಗೆ ಸರಬರಾಜು ಮಾಡುವಷ್ಟು ನಂದಿನಿ ತುಪ್ಪ ನಮ್ಮಲ್ಲಿ ತಯಾರು ಆಗುತ್ತಿಲ್ಲ ಎಂದು ಪಶುಸಂಗೋಪನೆ ಸಚಿವ ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ತಿರುಪತಿಗೆ ನಂದಿನಿ ತುಪ್ಪ ಕೊಡುವುದನ್ನು ನಿಲ್ಲಿಸಿರುವ ವಿಚಾರ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮಲ್ಲಿ ಸ್ಥಳೀಯರಿಗೇ ತುಪ್ಪ ಸಾಲುತ್ತಿಲ್ಲ. ನಮಗೇ ತುಪ್ಪದ ಕೊರತೆ ಇದೆ. ಹಾಗಾಗಿ, ತಿರುಪತಿಗೆ ಪೂರೈಕೆ ಮಾಡಕ್ಕೆ ಆಗ್ತಿಲ್ಲ. ಮುಂದೆ ನೋಡೋಣ ಎಂದು ಹೇಳಿದ್ದಾರೆ.
ಸಚಿವ ಮುನಿಯಪ್ಪ ಮಾತನಾಡಿ, ನಂದಿನಿ ತುಪ್ಪ ತುಂಬಾ ಚೆನ್ನಾಗಿದೆ. ಅದನ್ನು ಬಳಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ತಿರುಪತಿ ಅಂತ ಅಲ್ಲ, ಹಿಂದೆ ಎಲ್ಲೆಲ್ಲಿ ಸಪ್ಲೈ ಮಾಡ್ತಿದ್ವೋ ಅಲ್ಲೆಲ್ಲ ಮುಂದುವರಿಸೋಕೆ ನಾನು ಹೇಳ್ತೇನೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲಿ ಅಕ್ಕಿ ಒದಗಿಸುತ್ತೇವೆ
ರಾಜ್ಯಕ್ಕೆ ಅಕ್ಕಿ ನೀಡುವ ಬಗ್ಗೆ ಚರ್ಚೆ ಮಾಡಿಲ್ಲ. ಖುದ್ದು ಖರೀದಿ ಮಾಡಲು ತಯಾರಿ ಮಾಡಿಕೊಂಡಿದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಬೆಲೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲಿ ಅಕ್ಕಿ ಒದಗಿಸುತ್ತೇವೆ. ಅಲ್ಲಿಯವರೆಗೂ ದುಡ್ಡು ನೀಡಲಿದ್ದೇವೆ. ಈ ತಿಂಗಳು ಒಂದು ಕೋಟಿ ಕಾರ್ಡುದಾರರಿಗೆ ಹಣ ನೀಡಲಾಗಿದೆ. ಹೊಸ ಪಡಿತರ ಕಾರ್ಡುಗಳಿಗೆ ಶೀಘ್ರದಲ್ಲಿ ಅನುಮತಿ ನೀಡಿ, ವಿತರಣೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.