ವಿಜಯಪುರ : ಜೆಡಿಎಸ್ ಬಿಜೆಪಿಯಿಂದ ಸರ್ಕಾರ ಬೀಳಿಸೋ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಅದು ಯಾವ ಕಾಲಕ್ಕೂ ಸಾಧ್ಯವಿಲ್ಲ. ಅವರು ಏನು ಮಾಡಿದರೂ ಸರ್ಕಾರ ಬೀಳಿಸೋಕೆ ಅಗಲ್ಲ. ನಾವು 136 ಜನ ಇದ್ದಾಗ ಯಾವ ಕಾರಣದಿಂದ ಬೀಳಿಸ್ತಾರೆ, ಯಾಕೆ ಬೀಳಿಸ್ತಾರೆ ಎಂದರು.
ಶಾಸಕರಿಗೆ ಸಹಜವಾಗಿ ಕೆಲಸಗಳು ಆಗಬೇಕೆಂಬ ಒತ್ತಡವಿರುತ್ತದೆ. ಹೊಸ ಸರ್ಕಾರ ಬಂದ ವೇಳೆ ವರ್ಗಾವಣೆ ಬೇಡಿಕೆ ಇರುತ್ತದೆ. ವರ್ಗಾವಣೆ ವಿಚಾರದಲ್ಲಿ ಸಚಿವರು 6 ಪರ್ಸೆಂಟ್ ಮಾತ್ರ ವರ್ಗಾವಣೆ ಮಾಡಬೇಕೆಂಬ ನಿಯಮದ ಕಾರಣ ಹೆಚ್ಚು ವರ್ಗಾವಣೆ ಮಾಡಲಾಗಿಲ್ಲ. ಈ ವಿಚಾರದಲ್ಲಿ ಸಿಎಲ್ಪಿಯಲ್ಲಿ ಸಿಎಂ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಜೊತೆಗೆ ಹೋಗಲ್ಲ
ಸಿಎಂ ಸಿದ್ದರಾಮಯ್ಯ ಅವರು ಇಂಥ ಸಮಸ್ಯೆಗಳನ್ನು ಬಗೆಹರಿಸೋ ಭರವಸೆ ನೀಡಿದ್ದಾರೆ. ಸಿಎಲ್ಪಿ ಸಭೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಉಂಟಾಗಿಲ್ಲ. ನಾವು ಆಂತರಿಕವಾಗಿ ಚರ್ಚೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ ಎಂದು ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದರು.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿ, ಬಿಜೆಪಿ ಜೊತೆಗೆ ಹೋಗಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರೇ ಹೇಳಿದ್ದಾರೆ. ಸುಮ್ಮನೆ ಊಹಾಪೋಹ ಬೇಡ ಎಂದು ಕಿಡಿಕಾರಿದರು.