ಮಂಡ್ಯ : ಕಾಡಾನೆ ದಾಳಿಗೆ ಜಮೀನಿನಲ್ಲಿದ್ದ ತೆಂಗಿನ ಮರಗಳು ನೆಲಸಮವಾಗಿದ್ದು ರೈತ ಕಂಗಾಲಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪ ನಂದಿಪುರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಎರಡು ಕಾಡಾನೆಗಳು ದಾಳಿ ಮಾಡಿದ್ದರಿಂದ ತೆಂಗಿನ ಮರಗಳು ನೆಲಸಮವಾಗಿವೆ. ಗ್ರಾಮದ ಜಯರಾಮ ಎಂಬುವವರ ಜಮೀನಿನಲ್ಲಿ ಆನೆಗಳು ದಾಳಿ ಮಾಡಿವೆ. ಆನೆಗಳ ಪ್ರತ್ಯಕ್ಷದಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದ್ದು, ಸುಮಾರು ದಿನಗಳಿಂದ ನಮ್ಮ ಗ್ರಾಮದಲ್ಲಿ ಕಾಡಾನೆಗಳು ಹೆಚ್ಚಾಗಿವೆ.
ಜಮೀನಿನಲ್ಲಿದ್ದ ಸುಮಾರು ತೆಂಗಿನ ಮರಗಳನ್ನು ಮುರಿದು ಹಾಕಿ ನಷ್ಟ ಉಂಟಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ರು. ಕಾಡಾನೆಗಳನ್ನ ಓಡಿಸಬೇಕು, ಶೀಘ್ರದಲ್ಲೇ ಪರಿಹಾರ ನೀಡಬೇಕು. ನಮ್ಮ ಭಾಗದಲ್ಲಿ ಚಿರತೆ ಆನೆ ಹಾವಳಿ ಹೆಚ್ಚಾಗಿದೆ. ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಪರಿಹಾರ ನೀಡಬೇಕೆಂದು ರೈತರು ಮನವಿ ಮಾಡಿದ್ದಾರೆ.
ಶಿಂಷಾ ನದಿಯಲ್ಲಿ ತುಂಟಾಟ
ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿರುವ ಕಾಡಾನೆಗಳು ತುಂಟಾಟವಾಡಿವೆ. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಶಿಂಷಾ ನದಿಯ ನೀರಿನಲ್ಲಿ ಆನೆಗಳು ತುಂಟಾಟವಾಡಿವೆ. ಕಾಡಿಗೆ ಆನೆಗಳ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳ ಹರಸಾಹಸ ಪಡುತ್ತಿದ್ದಾರೆ. ಕಾಡಾನೆಗಳಿರುವ ಸ್ಥಳದಲ್ಲೇ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ.