ಹಾಸನ : ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆ ಗೆ ಚುನಾವಣೆ ನಡೆಯುತ್ತಿತ್ತು. ಎಲೆಕ್ಷನ್ ಮುಗಿದು ನೂತನ ಅಧ್ಯಕ್ಷರ ಆಯ್ಕೆ ಕೂಡ ಆಗಿದೆ. ಇಲ್ಲಿ ತನಕ ಸೈಲೆಂಟ್ ಆಗಿದ್ದ ಕೆಲ ಮಂದಿ ರೋಡ್ನಲ್ಲೇ ಬಡಿದಾಡಿಕೊಂಡಿದ್ದಾರೆ.
ಈ ಘಟನೆ ಕಂಡು ಬಂದಿದ್ದು ಹಾಸನ ಜಿಲ್ಲೆಯ ಹಳೆಬೀಡಿನಲ್ಲಿ. ರಸ್ತೆಯಲ್ಲೇ ಬಡಿದಾಡಿಕೊಳ್ಳುತ್ತಿದ್ದವರನ್ನು ನೆರೆದಿದ್ದ ಜನರು ಬಿಡಿಸಲು ಹರಸಾಹಸ ಪಟ್ಟಿದ್ದಾರೆ. ಬಡಿದಾಡಿಕೊಂಡವರು ಒಂದೇ ಪಕ್ಷದವರು ಅನ್ನೋದು ವಿಶೇಷ.
ಹಾಸನ ಜಿಲ್ಲೆಯ ಹಳೇಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಾದಿಗೇರುವ ಪೈಪೋಟಿಯಲ್ಲಿ ಒಂದೇ ರಾಜಕೀಯ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಚುನಾವಣೆ ದಿನ ಪರಸ್ಪರ ಮಾರಕಾಸ್ತ್ರಗಳನ್ನು ಹಿಡಿದು ಹೊಡೆದಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮೂವರು ಸದಸ್ಯರ ಮಧ್ಯೆ ಪೈಪೋಟಿ
ಬಿಸಿಎಂ (ಎ) ವಿಭಾಗಕ್ಕೆ ಮೀಸಲಾಗಿದ್ದ ಸ್ಥಾನಕ್ಕೆ ನೂತನವಾಗಿ ನಿತ್ಯಾನಂದ ಹಾಗೂ ಕಾಂತಾಮಣಿ ನಾಮಪತ್ರ ಸಲ್ಲಿಸಿದ್ದರು. ಬಿಸಿಎಂ (ಎ) ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಗಾದಿಗೆ ಮೂವರು ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಹಳೇಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ನಿತ್ಯಾನಂದ ಅಧ್ಯಕ್ಷರಾಗಿ ಹಾಗೂ ಕವಿತಾ ರಮೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇದು ಕೆಲವರನ್ನು ಕೆರಳಿಸಿದೆ.
ಪರಾಜಿತ ಅಭ್ಯರ್ಥಿಗಳ ಬೆಂಬಲಿಗರು ದಾಂಧಲೆ ಶುರುಮಾಡಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಸಾರಾಗವಾಗಿ ನಡೆದಿದ್ದರೂ, ಚುನಾವಣೆ ಬಳಿಕ ಆಕ್ರೋಶ ಭುಗಿಲೆದ್ದಿದೆ. ಅಧ್ಯಕ್ಷ ಗಾದಿಗಾಗಿ ಒಂದೇ ಪಕ್ಷಗಳ ಅಭ್ಯರ್ಥಿಗಳಲ್ಲಿನ ಮುಸುಕಿನ ಗುದ್ದಾಟ ಬಯಲಾಗಿದೆ.