ಕಲಬುರಗಿ : 5 ಸಾವಿರ ಸಾಲ ಕೊಡಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದ್ದ ಕೊಲೆ ಪ್ರಕರಣವನ್ನು ಕಲಬುರಗಿಯ ಜೇವರ್ಗಿ ಪೊಲೀದರು ಬೇಧಿಸಿದ್ದಾರೆ.
ಮದರಿ ಗ್ರಾಮದ ನಿವಾಸಿ ಅಶೋಕ್ ಪ್ಯಾಟಿ ಕೊಲೆಯಾದ ವ್ಯಕ್ತಿ. ಜಾನಪ್ಪ, ಸೋಮು ಮತ್ತು ಗುಂಡಪ್ಪ ಬಂಧಿತ ಆರೋಪಿಗಳು.
ಜುಲೈ 23ರಂದು ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಮದರಿ ಗ್ರಾಮದಲ್ಲಿ ನೆತ್ತರು ಹರಿದಿದ್ದನ್ನು ಕಂಡು ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. ಕೇವಲ 5 ಸಾವಿರ ಸಾಲದ ವಿಷಯಕ್ಕೆ ಈ ಕೊಲೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಜೇವರ್ಗಿ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.
ಮಹಿಳೆಗೆ ಸಾಲ ಕೊಡಿಸಿದ್ದ ಅಶೋಕ್
ಕಳೆದ ಐದು ವರ್ಷಗಳ ಹಿಂದೆ ಅಶೋಕ್ ಅದೇ ಗ್ರಾಮದ ಜಾನಪ್ಪನ ಚಿಕ್ಕಮ್ಮಳಿಂದ ಐದು ಸಾವಿರ ರೂ. ಸಾಲವನ್ನು ತನಗೆ ಪರಿಚಯವಿದ್ದ ಮಹಿಳೆಗೆ ಕೊಡಿಸಿದ್ದ. ಆದರೆ, ಐದು ವರ್ಷವಾದರೂ ಆ ಮಹಿಳೆ ದುಡ್ಡು ಹಿಂತಿರುಗಿಸಿರಲಿಲ್ಲ. ಪಡೆದ ಸಾಲ ಐದು ವರ್ಷಗಳಲ್ಲಿ ಬಡ್ಡಿ, ಚಕ್ರಬಡ್ಡಿ ಸೇರಿದಂತೆ 20 ಸಾವಿರ ರೂ. ಆಗಿದೆ. ಇದನ್ನು ಕೊಡುವಂತೆ ಜಾನಪ್ಪ ಮೃತ ಅಶೋಕ್ ಗೆ ಪೀಡಿಸುತ್ತಿದ್ದನು. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಪದೇ ಪದೆ ಜಗಳವಾಗ್ತಿತ್ತು.
ಜುಲೈ 23 ರಂದು ಹಣ ಕೊಡುವಂತೆ ಜಾನಪ್ಪ ಮೃತ ಅಶೋಕನಿಗೆ ಒತ್ತಾಯಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಬಳಿಕ ಜಾನಪ್ಪ ತನ್ನ ಸಹಚರರಾದ ಸೋಮು, ಗುಂಡಪ್ಪ ಎಂಬುವರ ಜೊತೆಗೂಡಿ ಅಶೋಕ್ ಮನೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.