Monday, December 23, 2024

ಡೈರೆಕ್ಟರ್ ಶಶಾಂಕ್ ಈಸ್ ಬ್ಯಾಕ್ : ಕೃಷ್ಣ-ಮಿಲನಾ ದಂಪತಿ ಮ್ಯಾಜಿಕ್

ಬೆಂಗಳೂರು : ಎಲ್ರೂ ಯಾವ ಪುರುಷಾರ್ಥಕ್ಕೆ ಸಿನಿಮಾ ಮಾಡ್ತಾರೋ ಗೊತ್ತಿಲ್ಲ. ಆದ್ರೆ ಡೈರೆಕ್ಟರ್ ಶಶಾಂಕ್ ಮಾತ್ರ ಪುರುಷನಿಗೆ ಹೆಣ್ಣಿನ ಮಹತ್ವವನ್ನ ಅರ್ಥೈಸೋಕೆ ಅಂತಲೇ ಸಿನಿಮಾ ಮಾಡಿದ್ದಾರೆ. ಗ್ರ್ಯಾಂಡ್ ಆಗಿ ರಿಲೀಸ್ ಆಗಿರೋ, ಕೌಸಲ್ಯಾ ಸುಪ್ರಜಾ ರಾಮ ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆ ಆಗ್ತಿದೆ. ಡೈರೆಕ್ಟರ್ ಶಶಾಂಕ್ ಈಸ್ ಬ್ಯಾಕ್ ಅಂತಿದ್ದಾರೆ.

ಸಿನಿಮಾನ ಹುಚ್ಚರಂತೆ ಪ್ರೀತಿಸುವ ಹಾಗೂ ಅದರಲ್ಲೇ ಜೀವಿಸುವ ತಂತ್ರಜ್ಞರು ಹಾಗೂ ಕಲಾವಿದರು ಒಟ್ಟಾಗಿ ಒಂದು ಸಿನಿಮಾ ಮಾಡಿದ್ರೆ ಹೇಗಿರುತ್ತೆ ಅಂತ ಒಮ್ಮೆ ಊಹಿಸಿಕೊಳ್ಳಿ. ಸದ್ಯ ಈ ವಾರ ತೆರೆಕಂಡಿರೋ ಕೌಸಲ್ಯಾ ಸುಪ್ರಜಾ ರಾಮ ಚಿತ್ರಕ್ಕೆ ಅಂಥದ್ದೊಂದು ಕಾಂಬಿನೇಷನ್ ಒಟ್ಟುಗೂಡಿದೆ. ಮನರಂಜನೆ ಜೊತೆ ಪ್ರೇಕ್ಷಕವರ್ಗಕ್ಕೆ ಏನಾದ್ರು ಮೆಸೇಜ್ ಕೊಡಬೇಕು ಅಂತ ಬಯಸೋ ಡೈರೆಕ್ಟರ್ ಶಶಾಂಕ್ ಹಾಗೂ ಲವ್ ಮಾಕ್ಟೇಲ್​ನಿಂದ ಮೈಕೊಡವಿ ಎದ್ದು ಬಂದಂತಹ ಡಾರ್ಲಿಂಗ್ ಕೃಷ್ಣ- ಮಿಲನಾ ದಂಪತಿ ಈ ಚಿತ್ರದಿಂದ ಮ್ಯಾಜಿಕ್ ಮಾಡಿದ್ದಾರೆ.

ಇದನ್ನು ಓದಿ : ತೆಲುಗು ‘ಭೀಮ’ನಿಗಾಗಿ ಒಂದಾದ ಸ್ಯಾಂಡಲ್ ​ವುಡ್ ಟಾಪ್ ಟೆಕ್ನಿಷಿಯನ್ಸ್

ಕೃಷ್ಣಲೀಲಾ ಚಿತ್ರದ ನಂತ್ರ ಕೊಂಚ ಹಿನ್ನಡೆ ಸಾಧಿಸಿದ್ದ ಶಶಾಂಕ್​ಗೆ ಹ್ಯಾಟ್ರಿಕ್ ಸೋಲಾಗಿತ್ತು. ಅಂದ್ರೆ ಅವ್ರ ಸಿನಿಮಾಗಳು ಅಷ್ಟಾಗಿ ನೋಡುಗರಿಗೆ ರುಚಿಸಿರಲಿಲ್ಲ. ಆದ್ರೀಗ ಕೊಹ್ಲಿ ವನವಾಸ ಮುಗಿಸಿ, ಎದ್ದು ಬಂದಂತೆ ಈ ಚಿತ್ರದಿಂದ ಫುಲ್ ಫಾರ್ಮ್​ಗೆ ಬಂದಿದ್ದಾರೆ ಶಶಾಂಕ್. ಚಿತ್ರ ನೋಡಿದ ಪ್ರತಿಯೊಬ್ಬರೂ ಶಶಾಂಕ್ ಈಸ್ ಬ್ಯಾಕ್ ಅಂತಿದ್ದಾರೆ. ಮಿಗಿಲಾಗಿ ಗಂಡು ಜಾತಿ ನೋಡಲೇಬೇಕಾದ ಸಿನಿಮಾ ಇದು ಅಂತ ಸೋಶಿಯಲ್ ಮೀಡಿಯಾಗಳಲ್ಲಿ ವೈಯಕ್ತಿಕವಾಗಿ ಬರೆದುಕೊಳ್ತಿದ್ದಾರೆ.

ಮೈಸೂರಲ್ಲಿ ಸಿನಿಮಾ ನೋಡಿದ ಡಾಲಿ, ಚಿತ್ರದ ಬಗ್ಗೆ ಕೊಂಡಾಡಿದ್ದಾರೆ. ಇನ್ನು ರಿಯಲ್ ಸ್ಟಾರ್ ಉಪೇಂದ್ರ, ಚಿರ ಯುವಕ ರಮೇಶ್ ಅರವಿಂದ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ಸ್​ ಎಲ್ಲಾ ಟೇಲ್ ಆಫ್ ಎರಿಯಲ್ ಮ್ಯಾನ್​​​ಗೆ ಫಿದಾ ಆಗಿದ್ದಾರೆ. ಸ್ಪೆಷಲ್ ಪ್ರೀಮಿಯರ್ ಶೋನಲ್ಲಿ ಮುಕ್ತವಾಗಿ ಹಾಡಿ, ಹೊಗಳಿದ್ದಾರೆ. ಇಂತಹ ಕಂಟೆಂಟ್ ಇಂದಿನ ಜನರೇಷನ್​ಗೆ ಬೇಕು ಅಂತ ಪ್ರಶಂಸಿಸಿದ್ದಾರೆ.

ಚಿತ್ರರಂಗದ ಸಾಕಷ್ಟು ಮಂದಿ ನಟ, ನಟಿಯರು, ಡೈರೆಕ್ಟರ್ಸ್​, ಪ್ರೊಡ್ಯೂಸರ್ಸ್​, ತಂತ್ರಜ್ಞರು ಕೌಸಲ್ಯಾ ಸುಪ್ರಜಾ ರಾಮ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆ ಸೆಲೆಬ್ರಿಟಿ ರಿವ್ಯೂ ನೋಡೋಕೂ ಮುನ್ನ ನಮ್ಮ ಹಾನೆಸ್ಟ್ ರಿವ್ಯೂ ರಿಪೋರ್ಟ್​ ಕೊಟ್ಟುಬಿಡ್ತೀವಿ. ನೋಡ್ಕೊಂಡ್ ಬನ್ನಿ.

ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಬೃಂದಾ ಆಚಾರ್ಯ, ರಂಗಾಯಣ ರಘು, ನಾಗಭೂಷಣ್, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್ ಮುಂತಾದವರು.

ಪುರುಷ ಪ್ರಧಾನ ಸಮಾಜದ ಬ್ರ್ಯಾಂಡ್ ಅಂಬಾಸಿಡರ್ ಸಿದ್ದೇಗೌಡ. ಕಟ್ಟಿಕೊಂಡ ಹೆಂಡ್ತಿ ಕೌಸಲ್ಯಾ ಸೇರಿದಂತೆ ಸಮಾಜದಲ್ಲಿರೋ ಎಲ್ಲಾ ಹೆಣ್ಮಕ್ಳು ಇರೋದೆ, ಗಂಡಸರ ಸೇವೆ ಮಾಡೋಕೆ ಅನ್ನೋ ಧೋರಣೆಯ ವ್ಯಕ್ತಿತ್ವದ ವ್ಯಕ್ತಿ. ಇವ್ರ ಏಕೈಕ ಪುತ್ರ ಚಿತ್ರದ ಕಥಾನಾಯಕ ರಾಮ್. ಅಂತಹ ಪರಿಸರದಲ್ಲಿ ಬೆಳೆಯೋ ರಾಮ್​ಗೂ ಸಹ ತಾನೊಬ್ಬ ಪುರುಷ ಅನ್ನೋ ಅಹಂ. ಕಾಲೇಜ್​ನಲ್ಲೂ ಅದೇ ವರ್ತನೆ ಇರೋ ರಾಮ್​ ಲೈಫ್​ಗೆ ನಾಯಕ ನಟಿ ಶಿವಾನಿಯ ಎಂಟ್ರಿ ಆಗುತ್ತೆ. ಅದಕ್ಕೆ ರಾಮ್​ರ ಅತ್ತೆ ಮಗ ಸಂತು ಕೂಡ ಸಾಥ್ ಕೊಡ್ತಾನೆ. ಅಲ್ಲಿಂದ ಶುರುವಾಗೋ ರಾಮ್​ ಜರ್ನಿ ಸಾಕಷ್ಟು ಏರಿಳಿತಗಳಿಂದ ಕೂಡಿರುತ್ತೆ. ಮೊದಲಾರ್ಧ ರಾಮ್ ತಾಯಿ ಕೌಸಲ್ಯಾ ನಿಧನದಿಂದ ಎಂಡ್ ಆದ್ರೆ, ದ್ವಿತಿಯಾರ್ಧ ಮುತ್ತು ಲಕ್ಷ್ಮಿಯ ಮತ್ತಿನಿಂದ ಶುರುವಾಗಲಿದೆ. ಕೊನೆಗೆ ರಾಮ್ ಅಹಂ ಕಡಿಮೆ ಆಗುತ್ತಾ ಇಲ್ವಾ..? ಶಿವಾನಿ ಮತ್ತು ಮುತ್ತುಲಕ್ಷ್ಮೀಯಲ್ಲಿ ರಾಮ್​​ ಯಾರ ಕೈಹಿಡಿಯಲಿದ್ದಾರೆ ಅನ್ನೋದೇ ಚಿತ್ರದ ಅಸಲಿ ಕಥೆ.

ಡಾರ್ಲಿಂಗ್ ಕೃಷ್ಣ ತಮ್ಮ ಮನೋಜ್ಞ ಅಭಿನಯದಿಂದ ನೋಡುಗರ ಡಾರ್ಲಿಂಗ್ ಅನಿಸಿಕೊಂಡಿದ್ದಾರೆ. ಫಸ್ಟ್ ಹಾಫ್​​ನಲ್ಲೇ ಎರಡು ಶೇಡ್​​ಗಳಲ್ಲಿ ನಟಿಸಿರೋ ಕೃಷ್ಣ, ದ್ವಿತಿಯಾರ್ಧದಲ್ಲಿ ಯಾರೂ ನಿರೀಕ್ಷಿಸಿರದ ರೇಂಜ್​ಗೆ ಕಾಣಿಸಲಿದ್ದಾರೆ. ಬದಲಾವಣೆ ಜಗದ ನಿಯಮ ಅನ್ನೋದಕ್ಕೆ ಪ್ರತಿರೂಪವಾಗಿ ಮಿಂಚುತ್ತಾರೆ. ಅವ್ರ ನಟನೆಯಲ್ಲಿ ಪರಿಪಕ್ವತೆ ಎದ್ದು ಕಾಣಲಿದೆ. ಲವರ್, ಮಗ, ಪತಿ ಹೀಗೆ ಬೇರೆ ಬೇರೆ ಆಯಾಮಗಳಲ್ಲಿ ಆತನ ಜವಾಬ್ದಾರಿಗಳು ಅವರ್ಣನೀಯ.

ಪ್ರೇಮಂ ಪೂಜ್ಯಂ ಚಿತ್ರದಿಂದ ಇಂಡಸ್ಟ್ರಿಗೆ ಕಾಲಿಟ್ಟ ಬೃಂದಾ ಆಚಾರ್ಯ, ಇದಕ್ಕೂ ಮುನ್ನ ಮತ್ತೊಂದು ಸಿನಿಮಾ ಮಾಡಿದ್ರೂ, ಇದು ಅವ್ರ ಬೆಸ್ಟ್ ಪರ್ಫಾಮೆನ್ಸ್ ಸಿನಿಮಾ. ನಗುಮುಖದಿಂದಲೇ ಪ್ರಪಂಚವನ್ನ ಗೆಲ್ಲುಬಲ್ಲ ಜೀವನೋತ್ಸಾಹ. ಹೆಣ್ಣಿನಲ್ಲಿರೋ ಸಹನೆ, ಕ್ಷಮಾ, ತಾಳ್ಮೆಯ ರೂಪಕವಾಗಿ ಶಿವಾನಿ ಪಾತ್ರದಲ್ಲಿ ಆಕೆಯ ನಟನೆ ಅಮೋಘ ಅನಿಸಿಲಿದೆ.

ಮಿಲನಾ ನಾಗರಾಜ್​ ರೋಲ್​​ನ ಮತ್ಯಾರೂ ಮಾಡಲಾರರೇನೋ ಅನ್ನೋ ಅಷ್ಟರ ಮಟ್ಟಿಗೆ ಜೀವಿಸಿದ್ದಾರೆ. ಮುತ್ತುಲಕ್ಷ್ಮೀ ಪಾತ್ರದಲ್ಲಿ ಮಿಲನಾ ಔಟ್​​ ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಆಕೆಯ ಹಾವ, ಭಾವ, ಆಂಗಿಕ ಭಾಷೆ ನಿಜಕ್ಕೂ ಶ್ಲಾಘನೀಯ. ಇನ್ನು ನಾಗಭೂಷಣ್ ಸದ್ಯ ಟ್ರೆಂಡಿಂಗ್​ನಲ್ಲಿರೋ ಪ್ರತಿಭಾನ್ವಿತ ಕಲಾವಿದ. ನಾಯಕನಟನ ಅತ್ತೆ ಮಗ ಸಂತು ಪಾತ್ರದಲ್ಲಿ ನಾಗಭೂಷಣ್ ಹುಬ್ಬೇರಿಸುತ್ತಾರೆ. ಚಿತ್ರದ ತೂಕ ಹೆಚ್ಚಿಸುವಲ್ಲಿ ಈ ಪಾತ್ರ ಸಹಕಾರಿ ಆಗಿದೆ.

ಸಿದ್ದೇಗೌಡನಾಗಿ ರಂಗಾಯಣ ರಘು, ಕೌಸಲ್ಯಾ ಪಾತ್ರದಲ್ಲಿ ಸಂಯುಕ್ತಾ ಬೆಳವಾಡಿ, ಸತ್ಯನಾಥ್ ರೋಲ್​​ನಲ್ಲಿ ಅಚ್ಯುತ್ ಕುಮಾರ್ ವಿಶೇಷ ಗಮನ ಸೆಳೆಯುತ್ತಾರೆ. ರಂಗಾಯಣ ರಘು ನಟನಾ ಸಾಮರ್ಥ್ಯವನ್ನ ಹೆಚ್ಚಿಸೋ ಕಾರ್ಯ ಈ ಸಿನಿಮಾ ಮಾಡಿದ್ದು, ಅವ್ರ ನೈಜ ಹಾಗೂ ಸಹಜ ಅಭಿನಯ ನೋಡುಗರಿಗೆ ರಿಯಲ್ ಫೀಲ್ ಕೊಡಲಿದೆ.

ಕೆಎಸ್​ಆರ್ ಪ್ಲಸ್ ಪಾಯಿಂಟ್ಸ್:

  • ಶಶಾಂಕ್​​ರ ಗಟ್ಟಿ ಕಥೆ, ನಿರ್ದೇಶನ & ನಿರೂಪಣೆ
  • ಯಧುನಂದನ್ ಚಿತ್ರಕಥೆ & ಸಂಭಾಷಣೆ
  • ಕೃಷ್ಣ, ಮಿಲನಾ, ಬೃಂದಾ & ನಾಗಭೂಷಣೆ ನಟನೆ
  • ಅರ್ಜುನ್ ಜನ್ಯ ಸಂಗೀತ & ಹಿನ್ನೆಲೆ ಸಂಗೀತ
  • ಸುಜ್ಞಾನ್ ಸಿನಿಮಾಟೋಗ್ರಾಫಿ & ಲೊಕೇಷನ್ಸ್
  • ರಿಚ್ ಪ್ರೊಡಕ್ಷನ್

ಎಂಥದ್ದೇ ಸಿನಿಮಾ ಆದ್ರೂ ಅಲ್ಲಿ ಏನಾದ್ರೂ ಒಂದು ಡಿಫೆಕ್ಟ್ ಇದ್ದೇ ಇರುತ್ತೆ. ಇಲ್ಲಿ ದ್ವಿತಿಯಾರ್ಧದಲ್ಲಿ ನಾಯಕನಟಿಗಿರೋ ಚಟ, ಅದರ ಹಿಂದಿನ ಕಥೆ ಜನರಲೈಸ್ ಮಾಡಿ ನೋಡಿದ್ರೆ, ತುಂಬಾ ರೇರ್ ಕೇಸ್. ಆದ್ರೆ ಸಿನಿಮಾದ ಉದ್ದೇಶ ಹಾಗೂ ಸಂದೇಶ ಮಾತ್ರ ಯುನಿಕ್ ಆಗಿದೆ. ಅದೊಂದನ್ನ ಬಿಟ್ಟರೆ ಉಳಿದಂತೆ ಇದೊಂದು ಪರ್ಫೆಕ್ಟ್ ಹಾಗೂ ನೀಟ್ ಮೂವಿ.

ಕೆಎಸ್​ಆರ್​ಗೆ ಪವರ್ ಟಿವಿ ರೇಟಿಂಗ್: 4/5

ಕಣ್ಮನ ತಣಿಸೋ ಅಂತಹ ಪ್ರೇಮಕಥೆಗಳಿಂದ ನೋಡುಗರಿಗೆ ವ್ಹಾವ್ ಫೀಲ್ ಕೊಡ್ತಿದ್ದ ಡೈರೆಕ್ಟರ್ ಶಾಂಕ್, ಈ ಬಾರಿ ತಾಯಿ- ಮಗನ ಬಾಂಧವ್ಯದ ಕಥಾನಕವನ್ನ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಬರೀ ಮನರಂಜನೆಗಷ್ಟೇ ಸೀಮಿತ ಆಗಬಾರದು. ಅದು ಇನ್ಫೋಟೈನ್ಮೆಂಟ್ ಆಗಿ, ಸಮಾಜವನ್ನ ತಿದ್ದುವ ಕಾರ್ಯ ಮಾಡ್ಬೇಕು. ಆ ನಿಟ್ಟಿನಲ್ಲಿ ಕೌಸಲ್ಯಾ ಸುಪ್ರಜಾ ರಾಮ, ಮಾಡ್ರನ್ ರಾಮನಾಗಿ ಬೆಳ್ಳಿತೆರೆಯಲ್ಲಿ ನೋಡುಗರ ಮನಸ್ಸಿಗೆ ನಾಟಲಿದೆ. ಪ್ರೇಕ್ಷಕರ ಜೀವನದಲ್ಲಿ ಬದಲಾವಣೆ ತರಲಿದೆ. ಬದಲಾವಣೆ ತರಬೇಕು ಕೂಡ. ಆಗಲೇ ಚಿತ್ರದ ಉದ್ದೇಶ, ನಿರ್ದೇಶಕರ ಶ್ರಮ ಸಾರ್ಥಕವಾಗಲಿದೆ. ಥಿಯೇಟರ್​​ನಲ್ಲಿ ಮಿಸ್ ಮಾಡದೆ ಕೌಸಲ್ಯಾ ತನಯ ರಾಮನ ಕಥೆಯನ್ನ ಕಣ್ತುಂಬಿಕೊಳ್ಳಿ.

ಒಟ್ಟಾರೆ ಈ ವೀಕೆಂಡ್ ಸಿನಿಮಾ ನೋಡೋಕೆ ಹೋಗೋರಿಗೆ ಇದು ಬೆಸ್ಟ್ ಚಾಯ್ಸ್ ಆಗಲಿದೆ. ಮಿಸ್ ಮಾಡದೆ ಸಕುಟುಂಬ ಸಮೇತ ಕೌಸಲ್ಯಾ ಸುಪ್ರಜಾ ರಾಮನನ್ನ ನೋಡಿ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES