ಬೆಂಗಳೂರು : ನಂದಿನಿ ಹಾಲಿನ ದರವನ್ನು ಆಗಸ್ಟ್ 1ರಿಂದ ಲೀಟರ್‌ಗೆ ಮೂರು ರೂಪಾಯಿಗಳಷ್ಟು ಹೆಚ್ಚಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಕರ್ನಾಟಕ ಹಾಲು ಒಕ್ಕೂಟದ ಉತ್ಪನ್ನಗಳ ಬ್ರಾಂಡ್ ಆಗಿರುವ ನಂದಿನಿ ಹಾಲಿನ ದರ ಹೆಚ್ಚಳದ ಬಗ್ಗೆ ಇತ್ತೀಚೆಗಷ್ಟೇ ಕೆಎಂಎಫ್ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸೇರಿದಂತೆ ಪ್ರಮುಖರು ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದಿದ್ದರು. ಇದೀಗ ದರ ಹೆಚ್ಚಳ ಪ್ರಸ್ತಾವನೆಗೆ ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ.
ಇದನ್ನೂ ಓದಿ : ನಂದಿನಿ ಹಾಲಿನ ದರ ಏರಿಕೆ ಅನಿವಾರ್ಯ : ವೆಂಕಟೇಶ್
ಸಿಎಂ ಸಿದ್ದರಾಮಯ್ಯ ಸಮರ್ಥನೆ
ಹಾಲು ಉತ್ಪಾದಕರ ಬೇಡಿಕೆಗಳನ್ನು ಪರಿಗಣಿಸಿ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಯ ನಂತರ ಸಚಿವ ಹೆಚ್.ಕೆ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪರಿಷ್ಕೃತ ದರ ಲೆಕ್ಕಾಚಾರದ ಪ್ರಕಾರ, ಲೀಟರ್‌ಗೆ 39 ರೂ. ಬೆಲೆಯ ಹಾಲು (ಟೋನ್ಡ್) ಆಗಸ್ಟ್ 1ರಿಂದ 42 ರೂ.ಗೆ ಮಾರಾಟವಾಗಲಿದೆ ಎಂದಿದ್ದಾರೆ.
ಹಾಲಿನ ದರ ಹೆಚ್ಚಳ ಕ್ರಮವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕದಲ್ಲಿ ಕಡಿಮೆ ದರದಲ್ಲಿ ಹಾಲು ಮಾರಾಟವಾಗುತ್ತಿದೆ. ನಮ್ಮ ರಾಜ್ಯಕ್ಕೆ ಹೋಲಿಸಿದರೆ ಇತರ ರಾಜ್ಯಗಳಲ್ಲಿ ಹಾಲು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ ಎಂದು ಹೇಳಿದ್ದಾರೆ.