ಬೀದರ್ : ಬೀದರ್ ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಹಾಗೂ ತೆಲಂಗಾಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದ ಕಾರಂಜಾ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯ ಶೇ. 90 ರಷ್ಟು ಪ್ರಮಾಣ ಭರ್ತಿಯಾಗಿದೆ.
7.691 ಟಿಎಂಸಿ ಸಾಮರ್ಥ್ಯದ ಜಲಾಶಯ ಇದಾಗಿದ್ದು, ಜಲಾಶಯದಲ್ಲಿ ಈಗ 6.736 ಟಿಎಂಸಿ ನೀರು ಸಂಗ್ರಹವಾಗಿದೆ. 5,500 ಕ್ಯೂಸೆಕ್ ಒಳ ಹರಿವು ದಾಖಲಾದರೆ, 7,000 ಕ್ಯೂಸೆಕ್ ಹೊರ ಹರಿವು ದಾಖಲಾಗಿದೆ. ಪ್ರಸಕ್ತ ಮುಂಗಾರಿನಲ್ಲಿ ಜಲಾಶಯಕ್ಕೆ ಒಟ್ಟಾರೆ 2.235 ಟಿಎಂಸಿ ಹೊಸ ನೀರು ಹರಿದು ಬಂದಿದೆ. ಇನ್ನು ಸಾಕಷ್ಟು ಪ್ರಮಾಣದ ನೀರು ಹರಿದು ಬರುತ್ತಿದೆ.
ಗದಗ ಜಿಲ್ಲೆಯಲ್ಲೂ ಪ್ರವಾಹದ ಭೀತಿ
ಗದಗ ಜಿಲ್ಲೆಯ ನದಿ ದಡದ ಗ್ರಾಮಗಳಿಗೆ ಪ್ರವಾಹದ ಆತಂಕ ಶುರುವಾಗಿದೆ. ಮಲಪ್ರಭಾ ನದಿ ದಡದ ಗ್ರಾಮಗಳಲ್ಲಿ ಧ್ವನಿವರ್ಧಕ ಮೂಲಕ ಎಚ್ಚರಿಕೆ ನೀಡಲಾಗಿದೆ. ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಗ್ರಾಮ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಮುನ್ನೆಚ್ಚರಿಕೆ ನೀಡಲಾಗಿದೆ. ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗ್ತಿದೆ, ನದಿಗೆ ಹೋಗಬಾರದು. ಜಾನುವಾರುಗಳನ್ನು ಸಹ ಬಿಡಬಾರದು ಎಂದು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿದ್ದಾರೆ.
ಸಂಪರ್ಕ ಕಡಿತ, ಗ್ರಾಮಸ್ಥರ ಪರದಾಟ
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಶಿಸೈ ಗ್ರಾಮದ ಜನರಿಗೆ ಮಳೆಯಿಂದ ಭಾರಿ ಕಂಟಕ ಸೃಷ್ಟಿಯಾಗಿದೆ. ಕಾಲು ಸಂಕ ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ. ಜೋಯಿಡಾದ ಬಜಾರಕುಣಂಗ, ಡಿಗ್ಗಿ ಸೇರಿ ಸುತ್ತಮುತ್ತ ಭಾರಿ ಮಳೆಯಾಗಿದೆ. ಇದರಿಂದ ಶಿಸೈ ಗ್ರಾಮದ 20 ಕುಟುಂಬಗಳು ಪರದಾಡುತ್ತಿದ್ದಾರೆ.