ಬೆಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಪಠ್ಯ ಪರಿಷ್ಕರಣೆ, ಶನಿವಾರ ನೋ ಬ್ಯಾಗ್, ಪಿಯುಸಿನ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಎಕ್ಸಾಂ ಹೀಗೆ ಅನೇಕ ಬದಲಾವಣೆಗಳನ್ನು ಮಾಡಿದೆ.
ಇದೀಗ, ಮತ್ತೊಂದು ಬದಲಾವಣೆಗೆ ಮುಂದಾಗಿದ್ದು, SSLC ಹಾಗೂ PU ವಿದ್ಯಾರ್ಥಿಗಳಿಗೆ ಎರಡು ಪೂರಕ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ SSLC ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 2 ಬಾರಿ ಪೂರಕ ಪರೀಕ್ಷೆ ನಡೆಸಲು ಚಿಂತನೆ ನಡೆಸಿದೆ.
ವರ್ಷದಲ್ಲಿ 2 ಬಾರಿ ಪೂರಕ ಪರೀಕ್ಷೆ
ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡ ನಂತ್ರ, ಅನುತ್ತೀರ್ಣ ಹಾಗೂ ಹಲವು ಕಾರಣದಿಂದ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗಾಗಿ ತಿಂಗಳೊಳಗೆ ಪೂರಕ ಪರೀಕ್ಷೆ ನಡೆಸಲಾಗುತ್ತಿತ್ತು. ಪೂರಕ ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯಲು ಒಂದು ವರ್ಷ ಕಾಯಬೇಕಿತ್ತು. ಹೀಗಾಗಿ, ಹೊಸ ಪರೀಕ್ಷಾ ಕ್ರಮದಂತೆ ವರ್ಷದಲ್ಲಿ ಎರಡು ಬಾರಿ ಪೂರಕ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ.
15 ದಿನದೊಳಗೆ 2ನೇ ಪೂರಕ ಪರೀಕ್ಷೆ
ಮೊದಲ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾದ 15 ದಿನಗಳ ಒಳಗಾಗಿ ಎರಡನೇ ಪೂರಕ ಪರೀಕ್ಷೆ ನಡೆಸಲು ತಿರ್ಮಾನಿಸಲಾಗಿದೆ. ಈಗಾಗಲೇ ಸಚಿವ ಮಧು ಬಂಗಾರಪ್ಪ, ಇಲಾಖೆಯ ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮವಹಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಶಿಕ್ಷಣ ಕ್ಷೇತ್ರದ ಪ್ರಮುಖರೊಂದಿಗೆ ಚರ್ಚೆ ನಡೆಸಿ, ರೂಪುರೇಷೆಗಳು, ಪರೀಕ್ಷಾ ಕ್ರಮದ ಬಗ್ಗೆಯೂ ಕರಡು ಸಿದ್ಧಪಡಿಸುವಂತೆ ನಿರ್ದೇಶನ ನೀಡಲಾಗಿದೆ.