ಶಿವಮೊಗ್ಗ : ಶಾಸಕ ತನ್ವೀರ್ ಸೇಠ್ ಅವರು ಕೆಜೆ ಹಳ್ಳಿ-ಡಿಜೆಹಳ್ಳಿ, ಹುಬ್ಬಳ್ಳಿ, ಶಿವಮೊಗ್ಗ ಹಾಗೂ ಇನ್ನಿತರ ಕಡೆ ನಡೆದ ಕೋಮು ಗಲಭೆಯ ಕೇಸನ್ನು ಹಿಂಪಡೆಯುವಂತೆ ಗೃಹ ಸಚಿವರಿಗೆ ಪತ್ರ ಬರೆದಿದ್ದಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಪ್ರಕರಣವನ್ನು ಹಿಂಪಡೆಯಬಾರದು. ಕೇಸ್ ಹಿಂಪಡೆದರೆ ಮುಸ್ಲಿಂ ಗೂಂಡಾಗಳಿಗೆ ಹಾಗೂ ಕೋಮು ಗಲಭೆಗೆ ಬೆಂಬಲಿಸಿದಂತಾಗುತ್ತದೆ ಎಂದು ಕಿಡಿಕಾರಿದ್ದಾರೆ.
ತಿರುಗಿಬೀಳುವ ಮುನ್ನ ಕ್ರಮ ಕೈಗೊಳ್ಳಿ
ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ಯುವತಿಯರು ಹಿಂದೂ ಯುವತಿಯರ ಅಂಗಾಂಗಳನ್ನು ಚಿತ್ರೀಕರಿಸಿ ಮುಸ್ಲಿಂ ಯುವಕರಿಗೆ ಕೊಡುತ್ತಿದ್ದು, ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬ ಬಗ್ಗೆ ತನಿಖೆ ಆಗಬೇಕು. ಹಿಂದೂ ಸಮಾಜ ಜಾಗೃತವಾಗಿ ತಿರುಗಿಬೀಳುವ ಮುನ್ನ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ನಯಾ ಪೈಸೆ ಬಿಡುಗಡೆ ಮಾಡಿಸಿಲ್ಲ
ಗುತ್ತಿಗೆದಾರರ ಕಾಮಗಾರಿಯ ಬಿಲ್ ಸುಮಾರು 28 ಸಾವಿರ ಕೋಟಿ ಇದೆ ಎಂದು ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ ಅವರು ಹಿಂದಿನ ಸರ್ಕಾರದ ಸಂದರ್ಭದಲ್ಲಿ ಹೋರಾಟ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಏಜೆಂಟರಾಗಿರುವ ಅವರು ಗುತ್ತಿಗೆದಾರರಿಗೆ ಈವರೆಗೆ ಒಂದು ನಯಾ ಪೈಸೆಯನ್ನು ಸಹ ಬಿಡುಗಡೆ ಮಾಡಿಸಿಲ್ಲ ಎಂದು ಲೇವಡಿ ಮಾಡಿದ್ದಾರೆ.