Monday, December 23, 2024

ನಮ್ಮ ಅಧ್ಯಕ್ಷರಿಗೆ ಏನು ನಡೆಯುತ್ತಿದೆ ಅಂತ ಗೊತ್ತಿರುತ್ತೆ : ಸಚಿವ ಮಹದೇವಪ್ಪ

ಬೆಂಗಳೂರು : ಕಾಂಗ್ರೆಸ್ ಸರ್ಕಾರ ಬೀಳಿಸಲು ಸಿಂಗಾಪುರದಲ್ಲಿ ಆಪರೇಷನ್ ನಡೆಯುತ್ತಿದೆ ಎಂದಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪರ ಸಚಿವ ಡಾ.ಎಚ್.ಸಿ ಮಹದೇವಪ್ಪ ಬ್ಯಾಟ್ ಬೀಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಅಧ್ಯಕ್ಷರಿಗೆ ಏನು ನಡೆಯುತ್ತಿದೆ ಅಂತ ಗೊತ್ತಿರುತ್ತದೆ ಎಂದು ಹೇಳಿದ್ದಾರೆ.

ಬಿಜೆಪಿಗೆ ರಾಜ್ಯದ ಜನತೆ ಯಾವತ್ತೂ ಮ್ಯಾಂಡೇಟ್ ಕೊಟ್ಟಿಲ್ಲ. ಅದರ ಫಲ ಉಂಡಿದ್ದಾರಲ್ಲ. ಪಾಠ ಕಲಿಬೇಕು, ಕಲಿತಿದ್ದರೆ ಒಳ್ಳೆಯದು. ಸರ್ಕಾರ ಬೀಳಿಸಲು ಯಾರು ತಂತ್ರ ಮಾಡ್ತಿದ್ದಾರೆ ಅಂತ ನನಗೆ ಗೊತ್ತಿಲ್ಲ. ಡಿ.ಕೆ ಶಿವಕುಮಾರ್​ ಅವರಿಗೆ ಎಲ್ಲಾ ಗೊತ್ತಿರುತ್ತೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಡಿಕೆಶಿ ಹೇಳಿಕೆಗಳಿಂದಲೇ ಸರ್ಕಾರದಲ್ಲಿ ಅಸ್ಥಿರತೆ : ಬಸವರಾಜ ಬೊಮ್ಮಾಯಿ

40 ವರ್ಷ ಆಯ್ತು, ನಾನು ಸ್ಪಂದಿಸುತ್ತಿಲ್ವಾ?

ಸಚಿವರ ವಿರುದ್ಧ ಶಾಸಕರು ಪತ್ರ ಬರೆದ ವಿಚಾರವಾಗಿ ಮಾತನಾಡಿ, ಇದರ ಬಗ್ಗೆ ನನಗೆ ಗೊತ್ತಿಲ್ಲ. ನೀವು (ಮಾಧ್ಯಮದವರು) ಹೇಳಿದ ಮೇಲೆಯೇ ಗೊತ್ತಾಗಿದ್ದು. ನಿಮ್ಮಿಂದ ನನಗೆ ಗೊತ್ತಾಗ್ತಿದೆ ಅಷ್ಟೇ. 40 ವರ್ಷ ಆಯ್ತು, ನಾನು ಸ್ಪಂದಿಸುತ್ತಿಲ್ವಾ? ನಿಮಗೆ ಏನು ಅನಿಸುತ್ತಿದೆ? ನನ್ನ ಇಲಾಖೆ ಬಗ್ಗೆ ನಾನು ಸಭೆ ನಡೆಸುತ್ತಿದ್ದೇನೆ. ಪತ್ರ ಬರೆದ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಜಾಣ್ಮೆಯ ನಡೆ ಪ್ರದರ್ಶಿಸಿದ್ದಾರೆ.

ಅವರ ತಂತ್ರ ಸಕ್ಸಸ್ ಆಗುವುದಿಲ್ಲ

ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒಂದಾಗಿದ್ದಾರೆ. ಅವರು ಹತಾಶರಾಗಿದ್ದಾರೆ. ಹತಾಶರಾದವರು ಏನು ಬೇಕಾದರೂ ಮಾಡುವ ಪ್ರಯತ್ನ, ತಂತ್ರ ಮಾಡಬಹುದು. ಆದರೆ, ಅವರು ಸಕ್ಸಸ್ ಆಗುವುದಿಲ್ಲ ಎಂದು ವಿಪಕ್ಷಗಳಿಗೆ ಸಚಿವ ಡಾ.ಎಚ್.ಸಿ ಮಹದೇವಪ್ಪ ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES