ಶಿವಮೊಗ್ಗ : ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಅಮಾನವೀಯ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತೆಯರು ಇಂದು ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಮಣಿಪುರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮಣಿಪುರದಲ್ಲಿ ಕುಕ್ಕಿ ಜನಾಂಗದ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಘಟನೆ ಅಮಾನವೀಯವಾದುದು. ಇಡೀ ಮಾನವ ಕುಲವೇ ತಲೆ ತಗ್ಗಿಸುವಂತದ್ದು. ಅದರಲ್ಲೂ ಮಹಿಳೆಯರನ್ನು ಬೆತ್ತಲೆಗೊಳಿಸಿ ಸಾಮೂಹಿಕ ಅತ್ಯಾಚಾರ ಮಾಡಿರುವುದು ಖಂಡನೀಯ. ಅಮಾನುಷ ಕೃತ್ಯ ಎಸಗಿದವರ ವಿರುದ್ದ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಮಹಿಳಾ ವಿರೋಧಿ
ಪ್ರಧಾನಿ ಮೋದಿಯವರು ಬೇಟಿ ಬಜಾವೊ ಬೇಟಿ ಪಡಾವೋ ಎಂದು ಬೊಬ್ಬೆ ಹೊಡೆದಿದ್ದಾರಷ್ಟೆ. ಮಣಿಪುರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಅಲ್ಲಿ ಬೆಂಕಿ ಹತ್ತಿ ಉರಿಯುತ್ತಿದ್ದರೂ ಕೂಡ ಪ್ರಧಾನಿಯವರು ಮೌನವಾಗಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲವಾಗಿದೆ. ಕೇಂದ್ರ ಸರ್ಕಾರ ಮಹಿಳಾ ವಿರೋಧಿಯಾಗಿದೆ ಎಂದು ದೂರಿದ್ದಾರೆ.