Friday, May 17, 2024

ನಿರಂತರ ವರ್ಷಧಾರೆ : ಭದ್ರಾ, ಶರಾವತಿ ನದಿಗಳ ಒಳಹರಿವು ಹೆಚ್ಚಳ

ಶಿವಮೊಗ್ಗ : ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರ ವರ್ಷಧಾರೆಯಾಗುತ್ತಿದೆ. ಘಟ್ಟಪ್ರದೇಶ ಮತ್ತು ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಾ, ಲಿಂಗನಮಕ್ಕಿ ಹಾಗೂ ಭದ್ರಾ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ಕಳೆದೊಂದು ವಾರದಲ್ಲಿ ಭದ್ರಾ ಜಲಾಶಯ 8 ಅಡಿ ಹಾಗೂ ಲಿಂಗನಮಕ್ಕಿ ಜಲಾಶಯ ಸುಮಾರು 19 ಅಡಿಯಷ್ಟು ಭರ್ತಿಯಾಗಿದೆ.  ತುಂಗಾ ಜಲಾನಯದ ಪ್ರದೇಶದಲ್ಲಿ ಮಳೆ ಬಿರುಸುಗೊಂಡಿದ್ದು, ಶೃಂಗೇರಿ, ಕೊಪ್ಪ, ಆಗುಂಬೆ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ತುಂಗಾ ನದಿ ಅಪಾಯ ಮಟ್ಟದಲ್ಲೇ ಹರಿಯುತ್ತಿದೆ.

ಇದನ್ನೂ ಓದಿ : ಜಲಾವೃತಗೊಂಡ ರಸ್ತೆ : ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳ ಆಗ್ರಹ

ಶರಾವತಿ ಹಾಗೂ ಭದ್ರಾ ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ವ್ಯಾಪಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಳೆದ ಮೂರು ದಿನಗಳಿಂದ ಮಳೆರಾಯ ಜಿಲ್ಲೆಯಲ್ಲಿ ಅಬ್ಬರಿಸತೊಡಗಿದ್ದು, ಪರಿಣಾಮ ಜಿಲ್ಲೆಯ ಪ್ರಮುಖ ನದಿಗಳು ಜೀವಕಳೆ ಪಡೆದುಕೊಂಡಿದೆ. ಮುಖ್ಯವಾಗಿ ತುಂಗಾ, ಭದ್ರಾ ಹಾಗೂ ಶರಾವತಿ ನದಿಗಳ ಒಳಹರಿವು ಹೆಚ್ಚಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆ?

ಶಿವಮೊಗ್ಗ ತಾಲೂಕಿನಲ್ಲಿ 48.20 ಮಿ.ಮೀ. ಮಳೆಯಾಗಿದೆ. ಉಳಿದಂತೆ ಭದ್ರಾವತಿಯಲ್ಲಿ 32.20 ಮಿ.ಮೀ., ತೀರ್ಥಹಳ್ಳಿಯಲ್ಲಿ 103.90 ಮಿ.ಮೀ., ಸಾಗರದಲ್ಲಿ 104.50 ಮಿ.ಮೀ., ಶಿಕಾರಿಪುರದಲ್ಲಿ 53.30 ಮಿ.ಮೀ., ಸೊರಬದಲ್ಲಿ 72.50 ಮಿ.ಮೀ. ಹಾಗೂ ಹೊಸನಗರ ತಾಲೂಕಿನಲ್ಲಿ 123.50 ಮಿ.ಮೀ. ಮಳೆ ದಾಖಲಾಗಿದೆ. ವಾಡಿಕೆಯಂತೆ ಸರಾಸರಿ 687.87 ಮಿ.ಮೀ. ಮಳೆಯಾಗಬೇಕಿದ್ದು, ಈವರೆಗೆ 570.89 ಮಳೆ ಬಿದ್ದಿದೆ. ವಾಡಿಕೆಗಿಂತ ಅಲ್ಪ ಹೆಚ್ಚಾಗಿಯೇ ಮಳೆಯಾಗಿದೆ.

RELATED ARTICLES

Related Articles

TRENDING ARTICLES