ಉಡುಪಿ : ಕಾಪು ತಾಲೂಕಿನಲ್ಲಿ ಭಾರಿ ಮಳೆ ಹಾಗೂ ಗಾಳಿಯಿಂದಾಗಿ ಕಳೆದ ಎರಡು ದಿನಗಳಲ್ಲಿ ಹತ್ತಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ನಷ್ಟವುಂಟಾಗಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಮತ್ತೆ ನೆರೆಯ ಭೀತಿ ಎದುರಾಗಿದೆ. ಇನ್ನಂಜೆ-ಮರ್ಕೋಡಿ ಹೊಳೆ ಬಳಿ, ಕಾಪು ಜನಾರ್ದನ ದೇವಸ್ಥಾನದ ಬಳಿ, ಮಲ್ಲಾರು-ಮೂಳೂರು-ಬೆಳಪು ಬೈಲ್, ಉಳಿಯಾರಗೋಳಿ ಕೈಪುಂಜಾಲು ಬೈಲು ಮುಳುಗಡೆಯಾಗಿದೆ.
ಕಳೆದ ಎರಡು ವಾರಗಳ ಹಿಂದೆ ನಿರಂತರ ಮಳೆಯಿಂದಾಗಿ ನೆರೆ ಕಂಡು ಬಂದಿದ್ದ ತಗ್ಗು ಪ್ರದೇಶಗಳಲ್ಲಿ ನೆರೆ ಇಳಿಮುಖವಾದ ಬಳಿಕ ಭತ್ತದ ಕೃಷಿ ಕೆಲಸಗಳು ಬಿರುಸಿನಿಂದ ನಡೆದಿದ್ದವು. ಆದರೆ, ಇದೀಗ ಮತ್ತೆ ಭಾರಿ ಮಳೆ ಸುರಿದ ಪರಿಣಾಮ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ. ನೂರಾರು ಹೆಕ್ಟೇರ್ ಕೃಷಿ ಗದ್ದೆಗಳಲ್ಲಿ ನಡೆಸಲಾಗಿರುವ ಭತ್ತದ ನಾಟಿ ಕೊಳೆಯುವ ಭೀತಿ ಎದುರಾಗಿದೆ.
ಇದನ್ನೂ ಓದಿ : ಗಾಳಿ-ಮಳೆಗೆ ಸಿಮೆಂಟ್ ಗೋದಾಮು, ಕಾರು ಜಖಂ
ವರುಣನ ಕಣ್ಣ ಮುಚ್ಚಾಲೆ ಆಟ
ಕೃಷಿ ಕಾರ್ಯಕ್ಕೆ ಕೆಲಸದವರ ಕೊರತೆ, ದುಬಾರಿ ವೆಚ್ಚದ ನಡುವೆ ಕೃಷಿ ಕಾರ್ಯ ಮಾಡುವ ಕೃಷಿಕರಿಗೆ ವರುಣನ ಕಣ್ಣ ಮುಚ್ಚಾಲೆ ಆಟಕ್ಕೆ ಕಂಗಲಾಗಿದ್ದಾರೆ. ಮಳೆ ಹಾನಿ ಮತ್ತು ನೆರೆ ಪೀಡಿತ ಪ್ರದೇಶಗಳಿಗೆ ಕಾಪು ಶಾಸಕರು, ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದ್ದಾರೆ.
ಮಲೆನಾಡು ಭಾಗದಲ್ಲಿ ಭಾರಿ ಮಳೆ
ಕಳೆದೊಂದು ವಾರದಿಂದ ಹಾವೇರಿ ಸೇರಿದಂತೆ ಮಲೆನಾಡು ಭಾಗದಲ್ಲಿ ಸಾಕಷ್ಟು ಮಳೆ ಆಗುತ್ತಿದೆ. ಇದರಿಂದ ಹಾವೇರಿಯಲ್ಲಿ ಹರಿಯುವ ವರದ, ಕುಮದ್ವತಿ, ಧರ್ಮ, ತುಂಗಭದ್ರಾ ನದಿಗಳು ಅಪಾಯದ ಮಟ್ಟವನ್ನ ಮೀರಿ ಹರಿಯುತ್ತಿದೆ. ಹಾವೇರಿ-ಕೂಡ್ಲ ಸಂಪರ್ಕಿಸುವ ವರದ ನದಿಯ ಸಂಪರ್ಕ ಸೇತುವೆ ನದಿಯ ನೀರು ತುಂಬಿ ಹರಿಯುತ್ತಿದೆ.