ಬೆಂಗಳೂರು : ಈ ತುಘಲಕ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಆರಕ್ಷಕರಿಗೆ ರಕ್ಷಣೆ ಇಲ್ಲದಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಈ ತುಘಲಕ್ ಸರ್ಕಾರ ಆಡಳಿತಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಸಮಾಜಘಾತುಕ ಶಕ್ತಿಗಳ ಅಟ್ಟಹಾಸ ಮಿತಿ ಮೀರಿದೆ. ಪೊಲೀಸರ ಮೇಲೆ ಹಲ್ಲೆಯಂತಹ ಪ್ರಕರಣಗಳು ಸಾಮಾನ್ಯವಾಗಿವೆ ಎಂದು ಕುಟುಕಿದೆ.
ಬಾಣಸವಾಡಿಯಲ್ಲಿ ಕರ್ತವ್ಯ ನಿರತ ಪೇದೆಯ ಮೇಲೆ, ಅಮಾನವೀಯ ಹಲ್ಲೆಯಾಗಿದೆ. ಸರ್ಕಾರ ಬಂದ ಆರಂಭದಲ್ಲಿ ಕಲ್ಬುರ್ಗಿಯಲ್ಲಿ ಪೊಲೀಸ್ ಪೇದೆಯ ಮೇಲೆ ಮರಳು ಟ್ರ್ಯಾಕ್ಟರ್ ಹರಿಸಿ ಕೊಲೆ ಮಾಡಲಾಗಿದೆ. ಕಲ್ಬುರ್ಗಿಯಲ್ಲಿ ಹಫ್ತಾ ವಸೂಲಿ ಸಂಬಂಧಿಸಿದಂತೆ, ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಮೇಲಧಿಕಾರಿಗಳಿಂದ ನಿತ್ಯ ಮಾನಸಿಕ ಹಿಂಸೆ, ಕಿರುಕುಳ ನೀಡಲಾಗಿದೆ ಎಂದು ಛೇಡಿಸಿದೆ.
ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕಿದ್ದ ಪೊಲೀಸರು, ಈ ಓಲೈಕೆ ರಾಜಕಾರಣ ಮಾಡುವ ಸರ್ಕಾರ ಆಡಳಿತಕ್ಕೆ ಬಂದ ಕಾರಣ, ತಮ್ಮ ಕರ್ತವ್ಯವನ್ನು ನಿಭಾಯಿಸಲು ಆಗದ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ ಎಂದು ಆಕ್ರೋಶ ಹೊರಹಾಕಿದೆ.