ಹುಬ್ಬಳ್ಳಿ : ಏಕಾಏಕಿ ಮನೆಗೆ ಬಂದ ಪೊಲೀಸರು ಪುತ್ರನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದು, ತಾಯಿ ಕಣ್ಣೀರು ಹಾಕಿರುವ ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶುಕ್ರವಾರ (ನಿನ್ನೆ) ಸಂಜೆ ಬೆಂಡಿಗೇರಿ ಠಾಣೆಯ ನಾಲ್ವರು ಪೊಲೀಸರು ಏಕಾಏಕಿ ಮನೆಗೆ ಭೇಟಿ ನೀಡಿದ್ದರು. ಮನೆಯಲ್ಲಿದ್ದ ಸೈಮನ್ ನನ್ನು ಠಾಣೆ ಬಾ.. ಅಂತ ತಾಯಿಯ ಎದುರೇ ಕರೆದುಕೊಂಡು ಹೋದರು. ಆದರೆ, ಯಾವ ಕಾರಣಕ್ಕೆ ನಿಮ್ಮ ಮಗನನ್ನು ಕರೆದೊಯ್ಯುತ್ತಿದ್ದೇವೆ ಅಂತ ತಾಯಿಗೆ ಮಾಹಿತಿ ನೀಡಿಲ್ಲ.
ನಿನ್ನೆ ಸಂಜೆ ನಾಲ್ವರು ಬಂದು ನನ್ನ ಮಗನನ್ನ ಕರೆದುಕೊಂಡು ಹೋಗಿದ್ದಾರೆ. ನನ್ನ ಮಗ ಏನೂ ತಪ್ಪು ಮಾಡಿಲ್ಲ. ಆದ್ರೂ ಕರೆದುಕೊಂಡು ಹೋಗಿದ್ದಾರೆ. ದುಡಿಯೋ ಮಗನನ್ನ ಕರೆದುಕೊಂಡು ಹೋಗಿದ್ದಾರೆ, ನಾನು ಏನು ಮಾಡಲಿ. ಪೊಲೀಸರು ಯಾಕೆ ಈ ರೀತಿ ಮಾಡಿದ್ದಾರೆ ಅಂತ ಗೊತ್ತಿಲ್ಲ ಎಂದು ಸೈಮನ್ ತಾಯಿ ಅಮೀನಾ ಕಣ್ಣೀರಿಟ್ಟಿದ್ದಾರೆ.
ಇದನ್ನು ಓದಿ: ರಾಜ್ಯ ಬಿಜೆಪಿ ‘ಲೀಡರ್ ಲೆಸ್ ಪಾರ್ಟಿ’ : ಜಗದೀಶ್ ಶೆಟ್ಟರ್
ಇತ್ತ, ನಿನ್ನೆ ಸಂಜೆ ಸೈಮನ್ ನನ್ನು ಕರೆದುಕೊಂಡು ಹೋಗಿದ್ದ ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಈ ಸಂಬಂಧ ಸೈಮನ್ ಸಂಬಂಧಿಕರು ಠಾಣೆಗೆ ಭೇಟಿ ನೀಡಿ ಪೊಲೀಸರ ಜೊತೆ ಮಾತನಾಡಿದ್ದರು. ಒಂದು ಗಂಟೆಯಲ್ಲಿ ನಿಮ್ಮ ಹುಡುಗನನ್ನು ಬಿಡ್ತೀವಿ, ನೀವು ಮನೆಗೆ ಹೋಗಿ ಅಂತ ಹೇಳಿದ್ದರು.
ಆದ್ರೆ, ಒಂದು ಗಂಟೆಯಲ್ಲಿ ಬಿಡ್ತೀವಿ ಎಂದವರು ಏಕಾಏಕಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ರೌಡಿ ಚಟುವಟಿಕೆ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಸೈಮನ್ ನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.