ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ವಿವಿಯಿಂದ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ.
ಜುಲೈ 21ರಂದು (ಶುಕ್ರವಾರ) ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವ ಸಮಾರಂಭ ನಡೆಯಲಿದೆ. ಈ ವೇಳೆ ಯಡಿಯೂರಪ್ಪಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ವಿವಿ ಕುಲಪತಿ ಪ್ರೊ.ಜಗದೀಶ್ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇರುವಕ್ಕಿಯಲ್ಲಿರುವ ವಿವಿ ಆವರಣದಲ್ಲಿ ಘಟಿಕೋತ್ಸವ ಸಮಾರಂಭ ನಡೆಯಲಿದೆ. ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾದಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು, ಪದವೀಧರರಿಗೆ ಪದವಿ ಪ್ರಧಾನ ಮಾಡಲಿದ್ದಾರೆ.
ಸುದೀರ್ಘ ರಾಜಕೀಯ ಅನುಭವವಿರುವ ಹಿರಿಯ ಮುತ್ಸದ್ಧಿ, ಧೀಮಂತ ನಾಯಕ, ರೈತಬಂಧುಗೆ ಡಾಕ್ಟರೇಟ್ ಗೌರವ!
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಗೌರವಕ್ಕೆ ಪಾತ್ರರಾದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರಿಗೆ ಅಭಿನಂದನೆಗಳು. pic.twitter.com/Xt3720PyCs
— BJP Karnataka (@BJP4Karnataka) July 20, 2023
ವೀರೇಂದ್ರ ಹೆಗ್ಗಡೆ ಭಾಷಣ
ಕೃಷಿ ಸಚಿವ ಹಾಗೂ ವಿವಿ ಸಹ-ಕುಲಾದಿಪತಿ ಎನ್. ಚಲುವರಾಯಸ್ವಾಮಿ ಗೌರವ ಉಪಸ್ಥಿತರಿರಲಿದ್ದಾರೆ. ಪದ್ಮವಿಭೂಷಣ ಪ್ರಶಸ್ತಿ ವಿಜೇತರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ ಅವರು 8ನೇ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
3 ಭತ್ತದ ತಳಿ ಬಿಡುಗಡೆ
ವಿವಿಯಲ್ಲಿ ಈ ವರ್ಷ 3 ಭತ್ತದ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ವಲಯ 7ಕ್ಕೆ ಸೂಕ್ತವಾದ ಅಧಿಕ ಇಳುವರಿ ಕೊಡುವ ಸಹ್ಯಾದ್ರಿ, ಸಿರಿ, ಗುಡ್ಡಗಾಡು ತಗ್ಗು ಪ್ರದೇಶಕ್ಕೆ ಸೂಕ್ತವಾದ ಸಹ್ಯಾದ್ರಿ ಜಲಮುಕ್ತಿ ಹಾಗೂ ಕರಾವಳಿ ಭಾಗದ ಮಜಲು ಹಾಗೂ ಬೆಟ್ಟು ಗದ್ದೆಗಳಲ್ಲಿ ಮುಂಗಾರಿನಲ್ಲಿ ಬೆಳೆಯಬಹುದಾದ ಸಹ್ಯಾದ್ರಿ, ಸಪ್ತಮಿ ತಳಿ ಬಿಡುಗಡೆ ಮಾಡಲಾಗಿದೆ.