ಉತ್ತರ ಕನ್ನಡ : ಅದು ಸುಂದರವಾದ ಕುಟುಂಬ. ಮದುವೆಯಾಗಿ 5 ವರ್ಷ ಕಳೆದರೂ ಆ ದಂಪತಿಗೆ ಮಕ್ಕಳ ಭಾಗ್ಯವಿರಲಿಲ್ಲ. 5 ವರ್ಷದ ಬಳಿಕ ಆ ಸಂಸಾರಕ್ಕೆ ಮುದ್ದಾದ ವಾರಸುದಾರನ ಆಗಮನವಾಗಿತ್ತು. ಆದ್ರೆ, ದೇವರು ಕೊಟ್ಟ ಕೈಯಲ್ಲೇ ಆ ಕಂದನನ್ನ ಮರಳಿ ತನ್ನ ಬಳಿ ಕರೆದುಕೊಂಡಿದ್ದಾನೆ.
ಹೌದು, ಸರಿಯಾದ ಸಮಯಕ್ಕೆ ವೆಂಟಿಲೇಟರ್ ಆಂಬ್ಯುಲೆನ್ಸ್ ಸಿಗದೆ ಮೂರು ತಿಂಗಳ ಗಂಡು ಮಗು ಉಸಿರು ನಿಲ್ಲಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಈ ಹೃದಯ ಕಲಕುವ ಘಟನೆ ನಡೆದಿದೆ.
‘ದೈವವೇ ನಮ್ಮ ಮೇಲೆ ಮುನಿಸೇಕೆ? ಕೊಟ್ಟವನೂ ನೀನೆ, ಈಗ ಕಿತ್ತುಕೊಂಡವನೂ ನೀನೆ. ನನ್ನ ಕಂದ ಯಾರಿಗೆ? ಏನು? ಕೇಡು ಬಯಸಿದ್ದ. ನನ್ನ ಕಂದನನ್ನ ಮರಳಿ ಕೊಟ್ಟು ಬಿಡು!’ ಅಂತ ಮನದಲ್ಲೇ ರೋಧಿಸುತ್ತಾ, ತಾಯಿ ತನ್ನ ಮಗುವನ್ನು ಮಡಿಲಲ್ಲಿ ತಬ್ಬಿ ಕೂತಿದ್ದ ದೃಶ್ಯ ಎಂಥವರ ಕಣ್ಣಂಚಲ್ಲೂ ನೀರು ತರಿಸುವಂತಿತ್ತು.
ವಿಧಿ ಆಟ ಏನು ಬಲ್ಲವರು ಯಾರು?
ತಾಲೂಕಿನ ಕಿನ್ನರ ಮೂಲದ ರಾಜೇಶ್ ದಂಪತಿಗೆ 5 ವರ್ಷದ ಬಳಿಕ ಗಂಡು ಮಗು ಜನಿಸಿತ್ತು. ಮೈಕೈ ತುಂಬಿಕೊಂಡಿದ್ದ ಆ ಕಂದನ ತುಂತಾಟ ಕಂಡು ಪೋಷಕರು ಕಳೆದ 5 ವರ್ಷದ ನೋವನ್ನು ಮರೆತಿದ್ದರು. ವಿಧಿ ಆಟ ಬಲ್ಲವರು ಯಾರು? ಕಫಾ ಹಿನ್ನಲೆಯಲ್ಲಿ ಮಗುವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು, ಮಗುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದರು.
ಇದನ್ನೂ ಓದಿ : ಈ ಸಾವು ನ್ಯಾಯವೇ! : ಪುಟ್ಟ ಕಂದಮ್ಮನ ಉಸಿರು ಕಸಿದ ಯಮರೂಪಿ ಟಿಪ್ಪರ್
ಬಾರದ ಲೋಕದತ್ತ ಕಂದನ ಪ್ರಾಣಪಕ್ಷಿ
ಆಸ್ಪತ್ರೆಗೆ ಸಾಗಿಸಲು ಮಕ್ಕಳ ವೆಂಟಿಲೇಟರ್ ಆಂಬ್ಯುಲೆನ್ಸ್ ಇರಲಿಲ್ಲ. ಈ ಹಿನ್ನಲೆ ಉಡುಪಿಯಿಂದ ವೆಂಟಿಲೇಟರ್ ಆಸ್ಪತ್ರೆ ತರೆಸಲು ಪೋಷಕರು ಮುಂದಾಗಿದ್ದರು. ಆದ್ರೆ, ಆಂಬ್ಯುಲೆನ್ಸ್ ಬರುವ ಮುನ್ನವೇ ಮಗುವಿನ ಪ್ರಾಣಪಕ್ಷಿ ಬಾರದ ಲೋಕದತ್ತ ಪಯಣಿಸಿತ್ತು. ಸುದ್ದಿ ತಿಳಿಯುತ್ತಲೇ ಪೋಷಕರಿಗೆ ಗರಬಡಿದಂತಾಯಿತು. ಆಸ್ಪತ್ರೆ ಮುಂದೆ ಪೊಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇತ್ತ, ಮಗುವಿನ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಸ್ಪತ್ರೆ ಬಳಿ ಜಮಾಯಿಸಿದರು. ಆಸ್ಪತ್ರೆ ಸಿಬ್ಬಂದಿ ಹಾಗೂ ಸಂಬಂಧಿಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣವೂ ನಿರ್ಮಾಣವಾಗಿತ್ತು. ಈ ಸುದ್ದಿ ಅದಾಗಲೇ ಪೊಲೀಸ್ ಠಾಣೆಗೆ ತಲುಪಿತ್ತು. ಕೂಡಲೇ, ಕಾರವಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ತಿಳಿಗೊಳಿಸಿದರು.