ಬೆಂಗಳೂರು : ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಡಿಷನ್ ನಡೆಯುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.
ವಿಧಾನಸಭೆಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡುತ್ತಿದ್ದ ವೇಳೆ ಮಧ್ಯೆ ಪ್ರವೇಶ ಮಾಡಿ ಅವರು ಮಾತನಾಡಿದರು.
ಎಸ್ಸಿಪಿಟಿಎಸ್ಪಿ ಹಣ ಡೈವರ್ಟ್ ಮಾಡಿದ್ದಕ್ಕೆ ಶಾಸಕ ಆರಗ ಜ್ಞಾನೇಂದ್ರ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಸರ್ಕಾರಕ್ಕಿಂತ ಹಣ ಕಡಿಮೆ ಮಾಡಲಾಗಿದೆ. ಮೇಲ್ನೋಟಕ್ಕೆ ಹಣ ಜಾಸ್ತಿ ಇಟ್ಟಿದ್ದಾರೆ ಅನಿಸುತ್ತದೆ. ಆದರೆ, ಉಚಿತ ಗ್ಯಾರಂಟಿಗಳ ಜಾರಿಗೆ ಹಣ ಡೈವರ್ಟ್ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಈ ಬಾರಿ ಮೋದಿಗೆ ಮೆಜಾರಿಟಿ ಸಿಗೋದಿಲ್ಲ : ಸಿದ್ದರಾಮಯ್ಯ
ನಿಮ್ಮ ಕಾಲದಲ್ಲಿ ಏನೇನು ಮಾಡಿದ್ದೀರಾ?
ಆಗ ಸಚಿವ ಪ್ರಿಯಾಂಕ್ ಖರ್ಗೆ, ನಿಮ್ಮ ಕಾಲದಲ್ಲಿ ಏನೇನು ಮಾಡಿದ್ದೀರಾ? ಅಂತ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಕಿಡಿಕಾರಿದರು. ಪದೇ ಪದೆ ಆರಗ ಜ್ಞಾನೇಂದ್ರ ಮಾತಿಗೆ ಯಾಕೆ ಅಡ್ಡಪಡಿಸುತ್ತಿದ್ದೀರಾ? ಎಂದು ಆಕ್ರೋಶಗೊಂಡರು.
ನೀವು ಯಾಕೆ ಎದ್ದೇಳುತ್ತಿದ್ದೀರಾ?
ಇದಕ್ಕೆ ಕೆರಳಿದ ಪ್ರಿಯಾಂಕ್ ಖರ್ಗೆ, ನೀವು ಕೂಡ ಯಾಕೆ ಎದ್ದೇಳುತ್ತಿದ್ದೀರಾ? ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಆಡಿಷನ್ ನಡೆಯುತ್ತಿದೆ. ಆ ರೀತಿಯಲ್ಲಿ ಎದ್ದು ಮಾತನಾಡುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು. ಈ ವೇಳೆ ಸ್ಪೀಕರ್ ಯು.ಟಿ ಖಾದರ ಮಧ್ಯೆಪ್ರವೇಶಿಸಿ, ಸದನದ ವಾಕ್ಸಮರವನ್ನು ಶಾಂತಗೊಳಿಸಿದರು.