ಬೆಂಗಳೂರು : ಈ ಸರ್ಕಾರದಲ್ಲಿ ಒಳಗೊಳಗೇ ಲಾವಾರಸ ಕುದೀತಿದೆ. ಸದ್ಯದಲ್ಲೇ ಅದು ಹೊರಗೆ ಬರುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಐದೂ ವರ್ಷ ಸಿದ್ದರಾಮಯ್ಯ ಸಿಎಂ ಅಂತ ಹೇಳಲಿ ನೋಡೋಣ ಎಂದು ಕುಟುಕಿದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರ ಕುರಿತು ಮಾತನಾಡು, ನನಗೆ ಬಂದ ಮಾಹಿತಿ ಪ್ರಕಾರ ದೇವೇಗೌಡರು, ಕುಮಾರಸ್ವಾಮಿ ಅವರು ದೆಹಲಿಗೆ ಹೋಗಬಹುದು. ಇಬ್ಬರಿಗೂ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಆಹ್ವಾನ ಕೊಟ್ಟಿರಬಹುದು. ಏನೇ ನಿರ್ಣಯ ಇದ್ದರೂ ನಮ್ಮ ಹೈಕಮಾಂಡ್ ನಾಯಕರು ತಗೋತಾರೆ ಎಂದು ಹೇಳಿದರು.
ಇದನ್ನೂ ಓದಿ : ಭಾರತ್ ಜೋಡೋ ಬಿಜೆಪಿಗೆ ಭಯ ಹುಟ್ಟಿಸಿದೆ : ಸಚಿವ ಸಂತೋಷ್ ಲಾಡ್
ಮೋದಿ ಜೊತೆ ದೇವೇಗೌಡ್ರು ನಿಂತರು
ಪ್ರಧಾನಿ ಮೋದಿಯವರಿಗೆ ಬೆಂಬಲ ಕೊಡಲು ಅನೇಕ ಪಕ್ಷಗಳು ಮುಂದೆ ಬಂದಿವೆ. ಕೋವಿಡ್ ಸಂದರ್ಭದಲ್ಲಿ ಮೋದಿಯವರ ಜೊತೆ ದೇವೇಗೌಡ್ರು ನಿಂತರು. ದೇಶದ ದೃಷ್ಟಿಯಿಂದ ಸಿದ್ಧಾಂತ ಮರೆತು ಎನ್ ಡಿಎ ಜೊತೆ ಹೋಗಬೇಕು ಅಂತ ದೇವೆಗೌಡ್ರು ಮತ್ತು ಕುಮಾರಸ್ವಾಮಿ ಯೋಚಿಸುತ್ತಿದ್ದಾರೆ. ಮುಂದಿನ ಎಲ್ಲಾ ತೀರ್ಮಾನವನ್ನು ಬಿಜೆಪಿ ನಾಯಕರು ಮಾಡ್ತಾರೆ. ದೇವೆಗೌಡರ, ಕುಮಾರಸ್ವಾಮಿ ಅವರ ಚಿಂತನೆಯನ್ನು ಅಭಿನಂದಿಸುತ್ತೇನೆ ಎನ್ನುವ ಮೂಲಕ ಮೈತ್ರಿ ಬಗ್ಗೆ ರವಿಕುಮಾರ್ ಸುಳಿವು ಕೊಟ್ಟರು.
ಎನ್‌ಡಿಎಗೆ 350 ಸ್ಥಾನ ಫಿಕ್ಸ್
ನಿತೀಶ್ ಕುಮಾರ್, ಶರದ್ ಪವಾರ್ ಶಕ್ತಿ ಕ್ಷೀಣವಾಗಿದೆ. ಮಮತಾ ಬ್ಯಾನರ್ಜಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಹೀಗಾಗಿ, ಈ ಬಾರಿ ಎನ್‌ಡಿಎಗೆ 350 ಸಂಸದ ಸ್ಥಾನ ಫಿಕ್ಸ್ ಎಂದು ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.