ವಿಜಯನಗರ : ಹಾವು ಕಚ್ಚಿ ರೈತ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಹಿರೇಬನ್ನಿಮಟ್ಟಿ ಗ್ರಾಮದಲ್ಲಿ ನಡೆದಿದೆ.
ವೀಣಾ ಲಿಂಗನಗೌಡ್ರು(26) ಸಾವನ್ನಪ್ಪಿರುವ ಮಹಿಳೆ. ಮೆಕ್ಕೆಜೋಳದ ತೆನೆ ಮುರಿಯುವ ಸಮಯದಲ್ಲಿ ಈಕೆಗೆ ಹಾವು ಕಚ್ಚಿತ್ತು. ಕೂಡಲೇ ಮಹಿಳೆಯನ್ನು ಹೊಳಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಗ ಮಧ್ಯೆಯೇ ಮಹಿಳೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಹೊಳಲು ಗ್ರಾಮದಿಂದ ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸೂಕ್ತ ಚಿಕಿತ್ಸೆ ಸಿಗದೆ ಮಹಿಳೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಹಿರೇಹಡಹಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡಗಿಕೊಂಡಿದ್ದ ಹಾವಿನ ರಕ್ಷಣೆ
ಬೈಕ್ ನೊಳಗೆ ಅಡಗಿಕೊಂಡಿದ್ದ ಹಾವನ್ನು ಉರಗ ತಜ್ಞ ಮಹಾಂತೇಶ ರಕ್ಷಣೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನಡೆದಿದೆ. ಸಂದೀಪ ಎಂಬುವವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಒಳಗಡೆ ಹಾವು ಸೇರಿಕೊಳ್ಳುತ್ತಿದ್ದನ್ನ ಪಕ್ಕದ ಮನೆಯ ವಸಂತಗೌಡ ಕಣ್ಣಾರೆ ಕಂಡಿದ್ದರು.
ಈ ಬಗ್ಗೆ ಉರಗ ತಜ್ಞ ಮಹಾಂತೇಶಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅವರು ಬೈಕ್ ನಲ್ಲಿದ್ದ ಹಾವು ರಕ್ಷಣೆ ಮಾಡಿದ್ದಾರೆ. ಬೈಕ್ ನಲ್ಲಿ ಹಾವು ಸೇರುತ್ತಿದ್ದದ್ದನ್ನು ನೋಡಿದ್ದರಿಂದ ಭಾರಿ ಅನಾಹುತ ತಪ್ಪಿದ್ದು, ಸಂದೀಪ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.