ಬೆಂಗಳೂರು : ಕಿಚ್ಚ 46 ಚಿತ್ರದ ಟೀಸರ್ನಿಂದ ಶುರುವಾದ ನಟ ಸುದೀಪ್ ಹಾಗೂ ನಿರ್ಮಾಪಕ ಎಂ.ಎನ್ ಕುಮಾರ್ ನಡುವಿನ ಜಟಾಪಟಿ, ಇದೀಗ ಕೋರ್ಟ್ ಮೆಟ್ಟಿಲೇರಿದೆ. ಕಾನೂನು ಸಮರಕ್ಕೆ ಮುಂದಾಗಿರೋ ಸುದೀಪ್, ಕುಮಾರ್ ಹಾಗೂ ಎನ್.ಎಂ ಸುರೇಶ್ ಮೇಲೆ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಮುಕುಂದ ಮುರಾರಿ ಚಿತ್ರದ ಬಳಿಕ ಹೊಸ ಸಿನಿಮಾ ಮಾಡಲು ಸುದೀಪ್ ಅಡ್ವಾನ್ಸ್ ಹಣ ಪಡೆದು ಕಾಲ್ಶೀಟ್ ಕೊಡದೆ ವಂಚಿಸಿದ್ದಾರೆ ಎಂದು ನಿರ್ಮಾಪಕ ಎಂ.ಎನ್ ಕುಮಾರ್ ಆರೋಪ ಮಾಡಿದ್ದರು. ಈ ಕುರಿತು ಫಿಲ್ಮ್ ಚೇಂಬರ್ ಹಾಗೂ ಶಿಸ್ತು ಸಮಿತಿ ಸಂಧಾನಕ್ಕೆ ಕರೆದಾಗ ಸುದೀಪ್ ಅವರು ಬಂದಿರಲಿಲ್ಲ. ಬದಲಿಗೆ ಪ್ರಕರಣದ ಕುರಿತು ತಮ್ಮ ವಕೀಲರಿಂದ ಸ್ಪಷ್ಟನೆ ನೀಡಿದ್ದರು.
ಮತ್ತೊಂದೆಡೆ, ಎಂ.ಎನ್ ಕುಮಾರ್ ಅವರು ಮಾಧ್ಯಮಗಳಲ್ಲಿ ಸುದೀಪ್ ಅವರ ಮಾನಹಾನಿ ಮಾಡುವುದಕ್ಕೆ ಮುಂದಾಗಿದ್ದರು. ಇದರಿಂದ ಕೆರಳಿದ ಕಿಚ್ಚ, ಕುಮಾರ್ ಮೇಲೆ ಲಾಯರ್ ನೋಟಿಸ್ ಮೂಲಕ 10 ಕೋಟಿ ರೂ. ಮಾನನಷ್ಟ ಪ್ರಕರಣ ಹಾಕಲು ತಾಕೀತು ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸದ ಕುಮಾರ್ ವಿರುದ್ಧ ಇದೀಗ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಆ.17ಕ್ಕೆ ವಿಚಾರಣೆ ಮುಂದೂಡಿದೆ
ವಕೀಲ ಅಜಯ್ ಕಡಕೋಳ್ ಮೂಲಕ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಆಗಸ್ಟ್ 17ಕ್ಕೆ ವಿಚಾರಣೆ ಮುಂದೂಡಿದೆ. ಇನ್ನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ನಾನು ಸರಿಯಾದ ಮಾರ್ಗದಲ್ಲಿ ಹೋಗುತ್ತಿದ್ದೇನೆ. ಎಲ್ಲರ ಆರೋಪಕ್ಕೆ ಉತ್ತರ ಕೊಡಲ್ಲ. ಸತ್ಯ-ಸುಳ್ಳುಗಳು ಕೋರ್ಟ್ನಲ್ಲಿ ಇತ್ಯರ್ಥ ಆಗಲಿ. ಮಾಧ್ಯಮವನ್ನು ಸರಿಯಾಗಿ ಬಳಸಿಕೊಳ್ಳಬೇಕು. ನನ್ನ ಸ್ಟಾರ್ಗಿರಿ ಅಥವಾ ಸಂಪಾದಿಸಿರುವ ಹೆಸರನ್ನು ಯಾರೂ ಅಳಿಸೋಕೆ ಸಾಧ್ಯವಿಲ್ಲ ಎಂದು ಗುಡುಗಿದರು.
ಇದನ್ನೂ ಓದಿ : RRR ರೆಕಾರ್ಡ್ ಬ್ರೇಕ್ ಮಾಡೋಕೆ KGF ಟೀಂ ಮಾಸ್ಟರ್ ಪ್ಲ್ಯಾನ್
ಇನ್ನು ಸುದೀಪ್ ಕಾನೂನು ಸಮರದ ಬಗ್ಗೆ ಪವರ್ ಟಿವಿ ಜೊತೆ ಮಾತನಾಡಿರುವ ನಿರ್ಮಾಪಕ ಎಂ.ಎನ್ ಕುಮಾರ್, ಸುದೀಪ್ ಅವರು ಕೋರ್ಟ್ಗೆ ಹೋಗಿರುವ ವಿಷಯ ನಿಮ್ಮಿಂದಲೇ ನನಗೆ ಗೊತ್ತಾಗಿದೆ. ಅವರು ಜುಲೈ 7ರಂದು ನೋಟಿಸ್ ಕಳುಹಿಸಿದ್ದಾರೆ. ನನಗೆ ಜುಲೈ 13ರಂದು ಅದು ತಲುಪಿದೆ. ನಾನು ಅದಕ್ಕೆ ನಿನ್ನೆ ಉತ್ತರ ಕೊಟ್ಟಿದ್ದೀನಿ. ನನಗೆ ಇಂಗ್ಲಿಷ್ ಬರಲ್ಲ. ನಾನು ಅವರ ವಿರುದ್ಧ ಆರೋಪ ಮಾಡಿಲ್ಲ. ಫಿಲ್ಮ್ ಚೇಂಬರ್ಗೆ ದೂರು ಸಹ ನೀಡಿಲ್ಲ. ಮನವಿ ಪತ್ರವಷ್ಟೇ ನೀಡಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಒಟ್ಟಾರೆ, ಸುದೀಪ್ ಹಾಗೂ ಕುಮಾರ್ ಅವರ ಜಟಾಪಟಿ ಕೋರ್ಟ್ ಅಂಗಲ ತಲುಪಿದೆ. ಕುಮಾರ್ ಪರ ಬ್ಯಾಟ್ ಬೀಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಿನ್ನೆಲೆ ನಿರ್ಮಾಪಕ ಎನ್.ಎಂ ಸುರೇಶ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
- ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ ಜೊತೆ ಸುಶ್ಮಿತಾ, ಪವರ್ ಟಿವಿ, ಬೆಂಗಳೂರು.