ದಕ್ಷಿಣ ಕನ್ನಡ : ಅದು ಜ್ಞಾನದೇಗುಲ. ನಿತ್ಯ ಮಕ್ಕಳು ಅಕ್ಷರ ಕಲಿಯುವ ಸ್ಥಳ. ಆ ಸ್ಥಳದ ಪಕ್ಕದಲ್ಲೇ ನಿಯಮ ಮೀರಿ ರಾಜಾರೋಷವಾಗಿ ಮದ್ಯದಂಗಡಿ ತಲೆ ಎತ್ತಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಕೋಣಾಜೆ ಬಳಿಯ ಕೈರಂಗಳದ ಶಾರದಾ ಗಣಪತಿ ವಿದ್ಯಾಲಯದ ಆವರಣ ಗೋಡೆಯ ಬಳಿಯಲ್ಲೇ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲಾಗಿದೆ. ಗ್ರಾಮಸ್ಥರು, ಪೋಷಕರು ಖಂಡಿಸಿ ಪ್ರತಿಭಟನೆಗಿಳಿದಿದ್ದಾರೆ.
ಅಧಿಕೃತ ನೇಮ್ ಬೋರ್ಡ್ ಬೀಳುವುದಕ್ಕೂ ಮೊದಲೇ ಒಳಗಡೆ ಮದ್ಯ ಮಾರಾಟ ಆರಂಭಗೊಂಡಿದೆ. ಹೊಸ ಕಟ್ಟಡ ಒಂದರಲ್ಲಿ ರಾಜಾರೋಷವಾಗಿ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಿಸಿದ್ದಾರೆ.
ಇದನ್ನೂ ಓದಿ : ಎಣ್ಣೆ, 1 ಬಾಟೆಲ್ ನೀರು, 10 ರೂ.ಗೆ ಶೇಂಗಾ ತಗೊಂಡು, ಓಡಾಡ್ತಾ ಕುಡೀತಾರೆ : ಸಚಿವ ತಿಮ್ಮಾಪುರ್
15 ಮೀಟರ್ ಅಂತರದಲ್ಲಿ ಬಾರ್
ಇದಕ್ಕೆ ಅಧಿಕಾರಗಳ ಕುಮ್ಮಕ್ಕಿದೆ ಎಂದು ಗ್ರಾಮಸ್ಥರು ಆರೋಪಿಸಿ, ಕಿಡಿಕಾರಿದರು. ಶಾಲೆಯ ಆವರಣದಿಂದ ಕೇವಲ 15 ಮೀಟರ್ ಅಂತರದಲ್ಲಿ ಈ ರೀತಿ ಮದ್ಯ ಮಾರಾಟ ಕೇಂದ್ರ ಆರಂಭಿಸಿದ್ದನ್ನು ವಿರೋಧಿಸಿ ಶಾಲಾ ವಿದ್ಯಾರ್ಥಿಗಳು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಅಧಿಕಾರಿಗಳ ‘ಕೈ’ ಬಿಸಿ ಮಾಡಿರುವ ಆರೋಪ
ಅಬಕಾರಿ ಇಲಾಖೆಯ ಅಧಿಕಾರಿಗಳ ‘ಕೈ’ ಬಿಸಿ ಮಾಡಿದ್ದರಿಂದ ನಿರಾಕ್ಷೇಪಣಾ ಪತ್ರ ಸಿಕ್ಕಿರಬೇಕು ಎನ್ನುವ ಮಾತು ಕೇಳಿಬರುತ್ತಿದೆ. ಕೇರಳ ಗಡಿಪ್ರದೇಶ ಆಗಿರುವುದರಿಂದ ಎರಡೂ ಕಡೆಯ ಗ್ರಾಹಕರನ್ನು ಸೆಳೆಯಬಹುದು ಎನ್ನುವ ದೃಷ್ಟಿಯಿಂದ ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಆರಂಭಿಸಲಾಗಿದೆ.