ಹಾಸನ : ಕಾಡಾನೆಗಳ ಹಿಂಡಿನ ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಸಿರಗುರ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಗಜಗಲಾಟೆ ಮುಂದುವರೆದಿದ್ದು, ಕಳೆದ ಮೂರು ದಿನಗಳಿಂದ 25ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದೆ. ಕಾಫಿ ತೋಟದಲ್ಲೆಲ್ಲಾ ಓಡಾಡಿ ಬೆಳೆ ನಾಶ ಮಾಡಿವೆ.
10 ರಿಂದ 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಫಿ, ಮೆಣಸು, ಅಡಿಕೆ ಬೆಳೆ ನಾಶ ಆಗಿದೆ. ಅಕ್ಷತಾ, ಸಂದೇಶ್, ಕಪಿಲ್, ಅಂಜನ್ ಹಾಗೂ ಇತರೇ ರೈತರಿಗೆ ಸೇರಿದ ಕಾಫಿ ತೋಟ ಹಾನಿಯಾಗಿದೆ. ಇದಲ್ಲದೆ, ನೀರು ತುಂಬಿದ್ದ ಬ್ಯಾರಲ್‌ಗಳನ್ನು ಧ್ವಂಸ ಮಾಡಿವೆ.
ಇದನ್ನೂ ಓದಿ : ಕಾಡಾನೆ ಜೊತೆ ಸೆಲ್ಫಿಗೆ ಪೋಸ್ : 20 ಸಾವಿರ ದಂಡ ಕಕ್ಕಿಸಿದ ಅರಣ್ಯ ಇಲಾಖೆ
ರಸ್ತೆಯಲ್ಲಿ ಬಂದು ನಿಲ್ಲುವ ಗಜಪಡೆ
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪಟಾಕಿ ಸಿಡಿಸಿದರೂ ಕಾಡಾನೆ ಹಿಂಡು ಕದಲಿಲ್ಲ. ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಹೋಗಿ ಬೀಡುಬಿಡುತ್ತಿದೆ. ಇದರಿಂದ ನಷ್ಟ ಮಾತ್ರವಲ್ಲದೆ ಆತಂಕ ಸೃಷ್ಟಿ ಮಾಡಿವೆ. ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇನ್ನೂ, ಕೆಲ ಕಾಡಾನೆ ರಸ್ತೆಯಲ್ಲಿ ಬಂದು ನಿಲ್ಲುತ್ತಿವೆ.
ನಮಗೆ ವಿಷ ಕೊಡಿ ಎಂದ ಬೆಳೆಗಾರರು
ಕಾಡಾನೆ ಕಾಟದಿಂದ ಜೀವ ಭಯ ಉಂಟಾಗಿದೆ. ಹೀಗಾಗಿ, ಶಾಲಾ, ಕಾಲೇಜಿಗೆ ತೆರಳುವ ಮಕ್ಕಳನ್ನು ಪೋಷಕರು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದಾರೆ. ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು. ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು. ಇಲ್ಲವಾದಲ್ಲಿ ನಮಗೆ ವಿಷ ಕೊಡಿ ಎಂದು ಕಂಗಾಲಾಗಿರುವ ಕಾಫಿ ಬೆಳೆಗಾರರು ಆಕ್ರೋಶ ಹೊರಹಾಕಿದ್ದಾರೆ.