Wednesday, January 22, 2025

ಬಡವರು ಎರಡು ಹೊತ್ತು ಅನ್ನ ತಿಂದ್ರೆ ಬಿಜೆಪಿಗೆ ಯಾಕೆ ಹೊಟ್ಟೆಯುರಿ? : ಸಿದ್ದರಾಮಯ್ಯ

ಬೆಂಗಳೂರು : ಎರಡು ಹೊತ್ತು ಅನ್ನ ತಿಂದರೆ ಬಿಜೆಪಿಗೆ ಯಾಕೆ ಹೊಟ್ಟೆಯುರಿ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕೆಂಡವಾದರು.

ವಿಧಾನಸೌಧದಲ್ಲಿ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

4 ಕೋಟಿ 42 ಲಕ್ಷ ಫಲಾನುಭವಿಗಳಿಗೆ ಈಗ ತಲಾ 170 ರೂ. ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗುತ್ತಿದೆ. ಬಡವರು, ಮಧ್ಯಮ ವರ್ಗದವರು ಎರಡು ಹೊತ್ತು ಅನ್ನ ತಿಂದರೆ ಬಿಜೆಪಿಗೆ ಯಾಕೆ ಹೊಟ್ಟೆಯುರಿ?ನಾಡಿನ ಜನತೆ ತಮ್ಮ ಖಾತೆಗೆ ಬರುವ ಹಣವನ್ನು ಊಟ, ಆಹಾರಕ್ಕಾಗಿ ಖರ್ಚು ಮಾಡಿ ನೆಮ್ಮದಿಯ ಬದುಕು ನಡೆಸಬೇಕು ಎಂದು ಹೇಳಿದರು.

ಇದನ್ನೂ ಓದಿ : ಸರಿ.. ದುಡ್ಡು ಕೊಟ್ರೂ ಎಷ್ಟು ಕೊಡ್ತಿದೀರಿ? : ಬೊಮ್ಮಾಯಿ ಗುಡುಗು

ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ

ಅನ್ನಭಾಗ್ಯ ಯೋಜನೆ ಘೋಷಣೆ ಆದ ತಕ್ಷಣ ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ಬಂದ್ ಮಾಡಿದರು. ಆ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರ ವಿರೋಧಿಯಾದ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ಅವರೇನು ಪುಕ್ಕಟ್ಟೆಯಾಗಿ ಅಕ್ಕಿ ಕೊಡುತ್ತಿರಲಿಲ್ಲ. ಕಿಲೋಗೆ 34 ರೂ. ನಮ್ಮಿಂದ ತೆಗೆದುಕೊಳ್ಳುತ್ತಿದ್ದರು ಎಂದು ಗುಡುಗಿದರು.

ಇದು ದ್ವೇಷದ ರಾಜಕಾರಣ ಅಲ್ವಾ?

ನಾಡಿನ ಜನರಿಗೆ ಅಕ್ಕಿ ಕೊಡುವುದನ್ನು ಬಂದ್ ಮಾಡಿದ ಕೇಂದ್ರ ಸರ್ಕಾರ ಬಳಿಕ ಇ-ಹರಾಜು ಮೂಲಕ ಆ ಅಕ್ಕಿಯನ್ನು ಹರಾಜು ಹಾಕಲು ಮುಂದಾಯಿತು. ಆದರೆ, ಈಗ ಇ-ಹರಾಜು ಮೂಲಕ ಅಕ್ಕಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಇದನ್ನು ನಾವು ಡರ್ಟಿ ಪಾಲಿಟಿಕ್ಸ್ ಅಂತ ಕರೆಯಬೇಕೋ ಬೇಡವೋ? ಇದನ್ನು ರಾಜ್ಯದ ಜನತೆಯ ವಿರುದ್ಧದ ದ್ವೇಷದ ರಾಜಕಾರಣ ಎಂದು ಕರೆಯಬೇಕೋ ಬೇಡವೋ? ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES