ತುಮಕೂರು : ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ರೈತ ಸಂಘ ನೇತೃತ್ವದಲ್ಲಿ ನೂರಾರು ರೈತರು ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ಧರಣಿ ನಡೆಸಿದರು.
ಗುಬ್ಬಿ ಪಟ್ಟಣ ಬೀದಿಯಲ್ಲಿ ಮೆರವಣಿಗೆ ನಡೆಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ದೊಡ್ಡಗುಣಿಮಠದ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ ಅವರು ಧರಣಿಯಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲ ಸೂಚಿಸಿದರು.
ಸದ್ಯ ಕೊಬ್ಬರಿ ಬೆಲೆ 7 ಸಾವಿರಕ್ಕೆ ಕುಸಿದಿದೆ. ಇದರಿಂದ ತುಮಕೂರಿನ ಕೊಬ್ಬರಿ ಬೆಳೆಗಾರರು ಕಂಗಾಲಾಗಿದ್ದಾರೆ. ಹೀಗಾಗಿ, ಕ್ವಿಂಟಾಲ್ ಗೆ 20 ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಇದನ್ನು ಓದಿ : ಅಕ್ಕಿ ಕೊಡೋ ಶಕ್ತಿ ನಮ್ಮ ಸರ್ಕಾರಕ್ಕೆ ಇದೆ : ಡಿಕೆಶಿ ಗುಡುಗು
ನಮ್ಮ ಕುಟುಂಬದ ಗತಿಯೇನು?
ನಾವು ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಲಿಲ್ಲ ಎಂದರೆ ನಾವು ಹೇಗೆ ಜೀವನ ನಡೆಸಬೇಕು. ನಮ್ಮ ಕುಟುಂಬದ ಗತಿಯೇನು? ರೈತ ಕಂಗಾಲಗಿ ತನ್ನ ನೋವನ್ನು ಹೇಳಿಕೊಂಡು ಧರಣಿಗೆ ಮುಂದಾಗಿದ್ದಾನೆ ಎಂದು ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.
ತೆಂಗು ಬೆಳೆಯಲು ಆಸಕ್ತಿ ಕುಸಿತ
ರಾಜ್ಯದಲ್ಲಿ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲಿ ಒಂದಾಗಿರುವ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದೆ. ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವುದರೊಂದಿಗೆ ತೆಂಗು ಬೆಳೆಯಲು ಆಸಕ್ತಿ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಕೂಡಲೇ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.