ಬೆಂಗಳೂರು : ಚುನಾವಣೆಯಲ್ಲಿ ಗೆಲ್ಲೋಕೆ ರಾಜಕೀಯ ಅನುಭವ ಇರಬೇಕು. ಇಲ್ಲ ಅಂದ್ರೆ, ರಾಜಕೀಯ ಕುಟುಂಬದ ಹಿನ್ನೆಲೆ ಹೊಂದಿರಬೇಕು. ಇವೆರಡೂ ಇಲ್ಲದಿದ್ರೆ ಮತದಾರರ ಸಂತೃಪ್ತಿಪಡಿಸುವಷ್ಟು ಹಣದ ಥೈಲಿ ಗಟ್ಟಿ ಇರಬೇಕು. ಆಗಲೇ ಎಂಎಲ್ಎ ಆಗೋಕೆ ಸಾಧ್ಯ. ಆದ್ರೆ, ಇದ್ಯಾವುದೂ ಇಲ್ಲದೆ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿ ಯಶಸ್ಸು ಕಂಡಿದ್ದಾರೆ ಬಿಜೆಪಿ ಯುವ ನಾಯಕ.
ಹೌದು, ರಾಜ್ಯ ರಾಜಧಾನಿಯ ಸನಿಹದಲ್ಲೇ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮೊದಲ ಬಾರಿ ಸ್ಪರ್ಧೆ ಮಾಡಿದ್ದ ಧೀರಜ್ ಮುನಿರಾಜು ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದ ಕಾಂಗ್ರೆಸ್‌ನ ವೆಂಕಟರಮಣಯ್ಯಗೆ ಶಾಕ್ ಕೊಟ್ಟು, 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇನ್ನೂ ಧೀರಜ್ ಮುನಿರಾಜು ಸಹ ದೊಡ್ಡಬಳ್ಳಾಪುರದಲ್ಲಿ ಚುನಾವಣೆ ಪೂರ್ವದಲ್ಲೂ ಸಹ ಕ್ಷೇತ್ರದ ಜನರ ಮನಸ್ಸು ಗೆದ್ದಿದ್ದರು. ಕೋವಿಡ್-19 ಸಂಕಷ್ಟದ ಸಮಯದಲ್ಲೂ ಧೀರಜ್ ಮುನಿರಾಜು, ಕ್ಷೇತ್ರದ ಜನರ ನೆರವಿಗೆ ನಿಂತಿದ್ದರಿಂದ ಶಾಸಕರಾಗಿ ಆಯ್ಕೆ ಆಗಿದ್ದಾರೆ ಅಂದ್ರೆ ತಪ್ಪಾಗಲಾರದು.
ಕೋವಿಡ್ ಸಂಕಷ್ಟದಲ್ಲಿ ಜನರಿಗೆ ಆಸರೆ
ಇನ್ನೂ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಧೀರಜ್ ಮುನಿರಾಜು ಅವರ ಕೊಡುಗೆ ಸಾಕಷ್ಟಿದೆ. ಕೊರೋನಾ ಸಮಯದಲ್ಲಿ ಜನರ ಕೈ ಹಿಡಿಯುವುದರ ಜೊತೆಗೆ ಕ್ಷೇತ್ರದ ನಿರಂತರ ಸಂಪರ್ಕ ಹೊಂದಿದ್ದರು. ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಚಿತ ನೇತ್ರ ತಪಾಸಣಾ, ದೇವಾಲಯಗಳ ಜೀರ್ಣೋದ್ಧಾರ, ಬಡವರಿಗೆ ಆರ್ಥಿಕ ನೆರವು ಸೇರಿದಂತೆ ಅನೇಕ ಸಮಾಜ ಸೇವೆಯನ್ನು ಅಂಜನಾದ್ರಿ ಟ್ರಸ್ಟ್ ಮೂಲಕ ಕ್ಷೇತ್ರದ ಜನರಿಗೆ ಒದಗಿಸಿದ್ದರು. ಈ ಎಲ್ಲಾ ಕಾರಣದಿಂದ ಕ್ಷೇತ್ರದ ಜನರ ಮನ ಗೆದ್ದು ಶಾಸಕರಾಗಿ ಆಯ್ಕೆಯಾದರು.
ಭವಿಷ್ಯದ ಸದೃಢ ನಾಯಕ
ಇನ್ನೂ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ಧೀರಜ್ ಮುನಿರಾಜು ಅವರು ಕ್ಷೇತ್ರದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವುದರ ಜೊತೆ ನಿರುದ್ಯೋಗ ಸಮಸ್ಯೆ ಬಗೆ ಹರಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿರುವ ಹೆಗ್ಗಳಿಕೆ ಸಹ ಇವರದ್ದಾಗಿದೆ. ಇನ್ನೂ ಬಿಜೆಪಿಯ ಕೇಂದ್ರಿಯ ನಾಯಕರ ಜೊತೆ ಉತ್ತಮ ಸಂಪರ್ಕ ಹೊಂದಿರುವ ಇವರು ಭವಿಷ್ಯದಲ್ಲಿ ಸದೃಢ ನಾಯಕರಾಗುವುತ್ತ ತಮ್ಮ ಚಿತ್ತ ಹರಿಸಿದ್ದಾರೆ.
ಒಟ್ಟಾರೆ, ನವ ಬೆಂಗಳೂರಾಗಿ ನಿರ್ಮಾಣಗೊಳ್ಳುತ್ತಿರುವ ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಧೀರಜ್ ಮುನಿರಾಜು ನೂತನ ಶಾಸಕರಾಗಿದ್ದಾರೆ. ಕ್ಷೇತ್ರದ ಜನಕ್ಕೆ ನೀಡಿರುವ ಭರವಸೆಗಳನ್ನು ಈಡೇರಿಸುವುದರ ಜೊತೆಗೆ ಕ್ಷೇತ್ರದ ಜನರ ವಿಶ್ವಾಸ ಗಳಿಸಿ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ.