Monday, May 20, 2024

ಕನಿಷ್ಠ ಆರು ತಿಂಗಳಾದರೂ ಕೆಲಸ ಸರಿಯಾಗಿ ಮಾಡಿ : ಪ್ರಲ್ಹಾದ್ ಜೋಶಿ

ಧಾರವಾಡ : ಕನಿಷ್ಠ ಆರು ತಿಂಗಳಾದರೂ ಕೆಲಸ ಸರಿಯಾಗಿ ಮಾಡಿ ಅಂತ ನಾನು ಸಲಹೆ ಕೊಡುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ವರ್ಗಾವಣೆಯಲ್ಲಿ‌ ಅನೇಕ ಕಡೆ ವಸೂಲಿ ನಡೆದಿದೆ ಎಂದು ದೂರಿದರು.

ಭ್ರಷ್ಟಾಚಾರ.. ಭ್ರಷ್ಟಾಚಾರ..! ಅಂತ ಮಾತನಾಡಿ ಅಧಿಕಾರಕ್ಕೆ ಬಂದಿದ್ದೀರಿ. ಈಗ ವಸೂಲಿ ಕೆಲಸ ಆರಂಭ ಮಾಡಿದ್ದೀರಿ. ಒಂದೊಂದು ಪೋಸ್ಟಿಗೆ ನಾಲ್ಕಾಲ್ಕು ಶಿಫಾರಸ್ಸು ಪತ್ರ ಕೊಡುತ್ತಿದ್ದಾರೆ. ಅದರೊಂದಿಗೆ ವಸೂಲಿ ಕೂಡ ಶುರುವಾಗಿದೆ. ನೀವು ಮಾಧ್ಯಮದವರು ಕೂಡ ಆಂತರಿಕ ತನಿಖೆ ಮಾಡಿ. ಯಾವ ರೀತಿ ವಸೂಲಿ ಆಗುತ್ತೆ ಅನ್ನೋದು ಗೊತ್ತಾಗುತ್ತೆ ಎಂದು ಛೇಡಿಸಿದರು.

ರಾಜ್ಯವನ್ನು ಸಾಲದ ಕೂಪ ತಳ್ಳುತ್ತಿದ್ದೀರಿ

ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಸ್ತಿ ತೆರಿಗೆ ಹೆಚ್ಚಳ ಮಾಡಿದ್ದಾರೆ. ಶೇ.10ರಷ್ಟು ತೆರಿಗೆ ಹೆಚ್ಚಿಸಿದ್ದಾರೆ. ಮತ್ತೆ ಯಾವ್ಯಾವ ತೆರಿಗೆ ಹೆಚ್ಚಿಸುತ್ತಾರೋ ನೋಡೋಣ. ಸರಿಯಾದ ಯೋಜನೆ ಇಲ್ಲದ ಬಜೆಟ್‌ ಇದು. ಈ ಬಜೆಟ್‌ನಿಂದ ರಾಜ್ಯ ಸಾಲದ ಕೂಪಕ್ಕೆ ಹೋಗುವ ಲಕ್ಷಣಗಳು ಕಾಣುತ್ತಿದೆ ಎಂದು ಕುಟುಕಿದರು.

ಇದನ್ನೂ ಓದಿ : ಸಿದ್ದರಾಮಯ್ಯ ಹಿಂದೂ ವಿರೋಧಿ ಬಜೆಟ್ ಮಂಡಿಸಿದ್ದಾರೆ : ಎನ್. ರವಿಕುಮಾರ್

ಜುಲೈ 1ಕ್ಕೆ ನೀಡಿರುವ ಅಕ್ಕಿ ಕೇಂದ್ರದ್ದು

ಪದೇ ಪದೆ ಕೇಂದ್ರ ಸರ್ಕಾರದ ಮೇಲೆ ಸಿಎಂ ಹಾಗೂ ಸಚಿವರು ಆರೋಪ ಮಾಡುತ್ತಿದ್ದಾರೆ. ಆದರೆ, ಜುಲೈ 1ಕ್ಕೆ ನೀಡಿರುವ ಅಕ್ಕಿಯೂ ಕೇಂದ್ರ ಸರ್ಕಾರದ್ದು. ಕರ್ನಾಟಕ ಸೇರಿ 80 ಕೋಟಿ ಜನರಿಗೆ ಅಕ್ಕಿ ವಿತರಿಸಲಾಗಿದೆ. ಈ ಅಕ್ಕಿಯನ್ನು ಕೇಂದ್ರ ಸರ್ಕಾರವೇ ಕೊಟ್ಟಿದೆ. ನೀವು ಅಕ್ಕಿಯನ್ನು ಕೊಟ್ಟಿಲ್ಲ. ಅದನ್ನು ನೀವು ಒಪ್ಪಿಕೊಳ್ಳಲೇಬೇಕು ಎಂದು ಚಾಟಿ ಬೀಸಿದರು.

ಎಲ್ಲ ಯೋಜನೆಗೆ ಅನಗತ್ಯ ಷರತ್ತು ಹಾಕಲಾಗಿದೆ. ಗ್ಯಾರಂಟಿ ಯೋಜನೆಗಳಿಗೂ ಷರತ್ತು ವಿಧಿಸಲಾಗುತ್ತಿದೆ. ಆ ಮೂಲಕ ನೀವು ಜನರಿಗೆ ಮೋಸ ಮಾಡಿದ್ದೀರಿ. ರಾಜ್ಯದ ಜನರಿಗೆ ಮೋಸ ಮಾಡುವ ಕೆಲಸ ಮುಂದುವರೆಸಿದ್ದೀರಿ ಎಂದು ಪ್ರಲ್ಹಾದ್ ಜೋಶಿ ಕಿಡಿಕಾರಿದರು.

RELATED ARTICLES

Related Articles

TRENDING ARTICLES