ಶಿವಮೊಗ್ಗ : ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿರುವ ಸಂಸತ್ ಸದಸ್ಯರು ಕೇಂದ್ರದಲ್ಲಿ ರಾಜ್ಯದ ಪರವಾಗಿ ಮಾತನಾಡಲು ಹಿಂಜರಿಯುತ್ತಿದ್ದಾರೆಂದು ಆರೋಪಿಸಿ ಶಿವಮೊಗ್ಗದಲ್ಲಿಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಂದು ಶಿವಮೊಗ್ಗದ ವಿನೋಬ ನಗರದ ಬಡಾವಣೆಯಲ್ಲಿರುವ ಸಂಸದ ಬಿ.ವೈ. ರಾಘವೇಂದ್ರ ನಿವಾಸಕ್ಕೆ ಮುತ್ತಿಗೆಗೆ ಮುಂದಾದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಇದೇ ವೇಳೆ ತಮ್ಮ ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ರಾಜ್ಯಕ್ಕೆ ಅಕ್ಕಿ ನೀಡುವಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಹಾಗೂ ಸಂಸದರು ರಾಜ್ಯಕ್ಕೆ ಅನ್ಯಾಯವೆಸಗುತ್ತಿದ್ದಾರೆಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸಂಸದರ ವಿರುದ್ದ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಪ್ರತಾಪ್ ಸಿಂಹ ಎದುರೇ ‘ಪೇಪರ್ ತಿಮ್ಮ’ ಎಂದ ‘ಕೈ’ ಕಾರ್ಯಕರ್ತರು
ಅಲ್ಲದೇ, ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರವು ಅಡ್ಡಿಪಡಿಸುತ್ತಿದೆ ಎಂದು ಕೇಂದ್ರದ ಜನವಿರೋದಿ ನೀತಿಯನ್ನು ಖಂಡಿಸಿದರು. ಕೇಂದ್ರ ಸರ್ಕಾರದ ಎದುರು ಬಿಜೆಪಿ ಸಂಸದರು ಸಂಸತ್ ನಲ್ಲಿ ಮಾತನಾಡದೆ ಇರುವುದರಿಂದ ಹಾಗೂ ಇಲ್ಲಿನ ಸಮಸ್ಯೆಯ ಬಗ್ಗೆ ತುಟಿ ಬಿಚ್ಚದಿರುವುದು ರಾಜ್ಯಕ್ಕೆ ಹಿನ್ನಡೆಯಾಗುತ್ತಿದೆ ಎಂದು ಕಿಡಿ ಕಾರಿದರು.
ರಾಜ್ಯಕ್ಕೆ ಯಾವ ಸವಲತ್ತು ಬರುತ್ತಿಲ್ಲ ಕೆಂಡವಾದರು. ಅಲ್ಲದೆ ಕೇಂದ್ರ ಸರ್ಕಾರ ಕೂಡ ರಾಜ್ಯಕ್ಕೆ ಅನ್ಯಾಯವೆಸಗುತ್ತಿದೆ ಎಂದು ಕೈ ಕಾರ್ಯಕರ್ತರು ಆಕ್ರೋಶಿತರಾದರು. ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.