ಬೆಂಗಳೂರು : ವರ್ಗಾವಣೆಗೆ ಮನನೊಂದು ಸಾರಿಗೆ ಬಸ್ ಚಾಲಕ ವಿಷ ಸೇವಿಸಿ ಸಾರಿಗೆ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲದ ಕೆಎಸ್ಆರ್ಟಿಸಿ ಡಿಪೋದ ಚಾಲಕ ಜಗದೀಶ್ ಎಂಬುವವರು ಸಾರಿಗೆ ಸಚಿವರಿಗೆ ಬಾಯಿಗೆ ಬಂದಂತೆ ಬೈಯ್ದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಕೆಲಸ ಮಾಡಿರುವ ಕಾರಣಕ್ಕಾಗಿ ತನ್ನನ್ನು ವರ್ಗಾವಣೆ ಮಾಡಲಾಗಿದೆ ಎಂದು ಚಾಲಕ ಅಧಿಕಾರಿಗಳ ವಿರುದ್ದ ಆರೋಪಿಸಿದ್ದಾನೆ.
ಅಲ್ಲದೆ ಈ ಚಾಲಕನ ವಿರುದ್ದ ಮಹಿಳಾ ನಿರ್ವಾಹಕಿಯ ಜೊತೆಗೆ ಅನುಚಿತವಾಗಿ ವರ್ತನೆ ಮಾಡಿರುವ ದೂರುಗಳು ಕೇಳಿ ಬಂದಿದ್ದವು. ಆ ದೂರಿನ ಹಿನ್ನೆಲೆಯಲ್ಲಿ ಚಾಲಕ ಜಗದೀಶನನ್ನು ಮದ್ದೂರಿನ ಡಿಪೋಗೆ ವರ್ಗಾವಣೆ ಮಾಡಲಾಗಿತ್ತು.
ಇದನ್ನೂ ಓದಿ : ನಮ್ಗೆ 40% ಕಮಿಷನ್ ಅಂತಿದ್ರು, ಇವರದು 100% ಸರ್ಕಾರ : ರವಿಕುಮಾರ್ ಪಂಚ್
ಆದರೆ ವಿಷವನ್ನು ಸೇವಿಸಿರುವ ಜಗದೀಶ್ ಬೇರೆಯ ಕಾರಣಗಳನ್ನೇ ಹೇಳಿ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಇಲಾಖೆಯ ಸಚಿವರ ವಿರುದ್ದ ತನ್ನ ಆಕ್ರೋಶವನ್ನು ಹೊರಹಾಕಿದ್ದಾನೆ.
ವಿಷ ಸೇವಿಸಿರುವ ಜಗದೀಶ್ಗೆ ನಾಗಮಂಗಲ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿದ್ದಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಚುಂಚನಗಿರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.