ಬೆಂಗಳೂರು : ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಮಧ್ಯಪ್ರದೇಶದ ಸೀದಿ ಜಿಲ್ಲೆಯಲ್ಲಿ ನಡೆದಿದ್ದ ಮೂತ್ರ ವಿಸರ್ಜನೆ ಪ್ರಕರಣದ ಆರೋಪಿಯನ್ನು ಮಧ್ಯಪ್ರದೇಶ ಪೋಲಿಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಕೈಯಲ್ಲಿ ಸಿಗರೇಟು ಹಿಡಿದು ಕುಡಿದ ಮತ್ತಿನಲ್ಲಿ ಬುಡಕಟ್ಟು ಜನಾಂಗದ ವ್ಯಕ್ತಿಯ ಮೇಲೆ ರಾಷ್ಟ್ರೀಯ ಪಕ್ಷದ ಮುಖಂಡನೊಬ್ಬ ಅಮಾನವೀಯವಾಗಿ ತನ್ನ ಕೊಳಕುತನದ ಬುದ್ದಿಯಿಂದ ಮೂತ್ರ ವಿಸರ್ಜನೆ ಮಾಡಿ ತನ್ನ ಕ್ರೌರ್ಯ ಮೆರೆದಿದ್ದನು.
ಮುಖಂಡನ ಈ ಹರಾಮಿ ನಡೆಯ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತಲ್ಲದೆ ಮಧ್ಯಪ್ರದೇಶ ಸರ್ಕಾರದ ಕಣ್ಣೀಗೂ ಈ ವಿಡಿಯೋ ಬಿದ್ದಿತ್ತು.
ಈ ಅಮಾನುಷ ಘಟನೆಯ ಕುರಿತು ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿ ನೆಟ್ಟಿಗರು ಘಟನೆಯನ್ನು ಖಂಡಿಸಿ ಆರೋಪಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಒತ್ತಾಯಿಸಿದ್ದರು. ಇದರ ಬೆನ್ನಲ್ಲೆ ಎಚ್ಚೆತ್ತ ಶಿವರಾಜ್ ಸಿಂಗ್ ನೇತೃತ್ವದ ಸರ್ಕಾರ ತನ್ನ ಕೊಳಕು ಬುದ್ದಿ ತೋರಿದ್ದ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದೆ.
ರಾಜಕೀಯ ಸ್ವರೂಪ ಪಡೆದ ಘಟನೆ..
ಬಿಎಸ್ಪಿ ನಾಯಕಿ ಮಾಯಾವತಿ,ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ ಸೇರಿದಂತೆ ಹಲವಾರು ಹೋರಾಟಗಾರರು ಆರೋಪಿಯ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಲ್ಲದೆ ಆ ಮುಖಂಡನೆಗೆ ಸಂಬಂಧಪಟ್ಟ ನಿವೇಶನಗಳನ್ನು ನೆಲಸಮಗೊಳಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದರು.
ಈ ಘಟನೆಯಿಂದ ಸ್ವತಃ ಮುಜುಗರಕ್ಕೊಳಗಾಗಿದ್ದ ಅಲ್ಲಿನ ಸರ್ಕಾರ ಹೋರಾಟಗಾರರ ಒತ್ತಾಯಕ್ಕೆ ಮಣಿದು ಬಂಧಿತ ಆರೋಪಿ ಪ್ರವೇಶ್ ಶುಕ್ಲಾಗೆ ಸಂಬಂಧಪಟ್ಟ ಕಟ್ಟಡಗಳನ್ನು ಧ್ವಂಸಗೊಳಿಸುವಂತೆ ಆದೇಶಿಸಿದ ಬೆನ್ನಲ್ಲೇ ಆರೋಪಿಯ ಕಟ್ಟಡಗಳ ಮೇಲೆ ಬುಲ್ಡೋಜರ್ ಘರ್ಜಿಸಿ ಕಟ್ಟಡಗಳನ್ನು ನೆಲಸಮಗೊಳಿಸಿದೆ.
ಪ್ರಕರಣವನ್ನು ಸ್ವತಃ ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಆರೋಪಿಯ ವಿರುದ್ದ ಹಲವು ಸೆಕ್ಷನ್ಗಳಲ್ಲಿ ಪ್ರಕರಣಗಳನ್ನು ಸೇರಿಸಿ ಕಟ್ಟುನಿಟ್ಟಿನ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೇಸ್ ದಾಖಲಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಪ್ರವೇಶ್ ಶುಕ್ಲಾ ವಿರುದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ದೌರ್ಜನ್ಯ ಕಾಯ್ದೆಯಡಿಯೂ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಹೇಯ ಕೃತ್ಯಗಳಿಗೆ ಸಮಾಜದಲ್ಲಿ ಜಾಗವಿಲ್ಲ….!
ಈ ಘಟನೆಗೆ ಕೆಂಡವಾಗಿರುವ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ,ಸಚಿವ ಕಮಲ್ ನಾಥ್, ಈ ಪ್ರಕರಣವು ಇಡೀ ಮಧ್ಯ ಪ್ರದೇಶ ರಾಜ್ಯಕ್ಕೆ ಕಳಂಕ ತರುವಂಥದ್ದು ಅಲ್ಲದೆ ಇಡೀ ರಾಜ್ಯವನ್ನೇ ನಾಚಿಕಿಗೇಡು ಮಾಡಿದೆ.
ತಪ್ಪಿತಸ್ಥನಿಗೆ ಕಠಿಣ ಶಿಕ್ಷೆಯನ್ನು ನೀಡಿ ಆದಿವಾಸಿಗಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯಬೇಕೆಂದು ಹೇಳಿದರು. ಅಲ್ಲದೆ ಆದಿವಾಸಿ ಜನರೊಂದಿಗೆ ಹೇಯ ಕೃತ್ಯಗಳಿಗೆ ನಾಗರಿಕ ಸಮಾಜ ವ್ಯವಸ್ಥೆಯಲ್ಲಿ ಅವಕಾಶವಿಲ್ಲವೆಂದು ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಸಿದ್ದಾರೆ.
ಆರೋಪಿಯ ಅಮಾನವೀಯ ನಡೆಗೆ ವ್ರ್ಯಘ್ರವಾಗಿರುವ ರಾಷ್ಟ್ರೀಯ ಪಕ್ಷವೊಂದರ ಶಾಸಕರು ಆರೋಪಿಗೂ ನಮಗೂ ಯಾವುದೇ ಸಂಬಂಧವಿಲ್ಲ ಆರೋಪಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಈ ರೀತಿಯ ಅಮಾವೀಯತೆ ತೋರಿ ಕ್ರೌರ್ಯ ಮೆರೆಯುವ ಇಂತಹ ದುಷ್ಟರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದೆ ಮಾಡಿದ ಘನ,ಘೋರ ತಪ್ಪಿಗೆ ಬೆಲೆ ತೇರಲೇಬೇಕಾಗಿದೆ ಎಂದು ಎಲ್ಲೆಡೆ ವ್ಯಾಪಕ ಒಕ್ಕೊರಲಿನ ಅಭಿಪ್ರಾಯ ಕೇಳಿ ಬರುತ್ತಿದೆ.