ಬೆಂಗಳೂರು : ರಾಜ್ಯದಲ್ಲಿ ಮತ್ತೊಬ್ಬ ಅಜಿತ್ ಪವಾರ್ ಹುಟ್ಟುತ್ತಾರೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದರು.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಏನು ಬೇಕಾದ್ರೂ ಆಗಬಹುದು ಎಂದರು.
ಪಾಲಿಟಿಕ್ಸ್ ಅಂದ್ರೆ Fast Changing Instrument. ಆಗಬಹುದು, ಆಗದೇ ಇರಬಹುದು. ಸಾಧ್ಯತೆಗಳನ್ನು ತಳ್ಳಿ ಹಾಕೋಕೆ ಸಾಧ್ಯವಿಲ್ಲ. ರಾಜ್ಯದಲ್ಲೂ, ಇಲ್ಲ ರಾಷ್ಟ್ರದಲ್ಲೂ ತಳ್ಳಿ ಹಾಕೋಕೆ ಸಾಧ್ಯವಿಲ್ಲ. ಈಗ ಪ್ರಧಾನಿ ಮೋದಿ ವಿರುದ್ಧ ವಿಪಕ್ಷಗಳು ಸಂಘಟನೆ ಆಗ್ತಿದೆ. ಚುನಾವಣೆ ಪೂರ್ವ ತಾಲೀಮು ಶುರುವಾಗಿದೆ. ರಾಜಕಾರಣದಲ್ಲಿ ಈಗ ಇರೋದು, ನಾಳೆ ಇರೋಲ್ಲ ಎಂದು ಹೇಳಿದರು.
ಇದನ್ನೂ ಓದಿ : ನನ್ನ ಮೇಲೆ ಐಟಿ ದಾಳಿಯಾದ್ರೆ ದೇವೇಗೌಡ್ರೇ ಕಾರಣ : ಕೆ.ಎನ್ ರಾಜಣ್ಣ
ಬಿಡ್ತೀನಿ ಅನ್ನೋ ಬದಲು ಬಿಡ್ಲಿ
ಹೆಚ್.ಡಿ ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡುದ್ರೆ ಸಚಿವರು ನಿದ್ದೆಗೆಡ್ತಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ರಾಜಣ್ಣ, ಶೀಘ್ರವಾಗಿ ದಾಖಲೆಗಳನ್ನು ಬಿಡೋದಕ್ಕೆ ಹೇಳಿ. ಬುಟ್ಟಿಯಲ್ಲಿ ಹಾವು ಇಟ್ಕೊಂದು, ಬಿಡ್ತೀನಿ.. ಬಿಡ್ತೀನಿ ಅಂತ ಹೇಳೋ ಬದಲು, ಬೇಗ ದಾಖಲೆ ಬಿಡ್ಲಿ ಅಂತ ನಿಮ್ಮ ಮೂಲಕ ಮನವಿ ಮಾಡ್ತಿನಿ ಎಂದು ಚಾಟಿ ಬೀಸಿದರು.
ಸುಮ್ಮನೆ ಜೈಲಿಗೆ ಹಾಕ್ತಾರಾ?
ದಾಖಲೆ ಕೊಡಿ, ದಾಖಲೆ ಕೊಡಿ ಅಂತಾರೆ. ಆದರೆ, ಪಿಎಸ್ ಐ ಸ್ಕ್ಯಾಮ್ ನಲ್ಲಿ ಎಡಿಜಿಪಿ ಜೈಲಿನಲ್ಲಿದ್ದಾರೆ. ನ್ಯಾಯಾಧೀಶರು ಸುಮ್ಮನೆ ಜೈಲಿಗೆ ಹಾಕ್ತಾರಾ? ಇದಕ್ಕಿಂತ ದಾಖಲೆಗಳು, ಆಧಾರ ಏನು ಬೇಕು? ಜೆಡಿಎಸ್ ಬಿ ಟೀಮ್ ಬಿಜೆಪಿ ಅಂತ ಈ ಹಿಂದೆ ಚುನಾವಣೆಯಿಂದಲೂ ಹೇಳ್ತಿದ್ದೀನಿ ಎಂದು ಸಚಿವ ಕೆ.ಎನ್ ರಾಜಣ್ಣ ಕುಟುಕಿದರು.