ಗಂಗಾವತಿ : ಇತಿಹಾಸ ಪ್ರಸಿದ್ಧ ಅಂಜನಾದ್ರಿ ಆಂಜನೇಯ ದೇವಸ್ಥಾನ ಹುಂಡಿಯಲ್ಲಿ 40 ದಿನಗಳಲ್ಲಿ ಬರೋಬ್ಬರಿ 26.57 ಲಕ್ಷ ರೂ.ಗಳ ದಾಖಲೆ ಸಂಗ್ರಹವಾಗಿದೆ.
ಹೌದು, ಸರ್ಕಾರದ ಶಕ್ತಿಯೋಜನೆಯಿಂದ ರಾಜ್ಯದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. ಉಚಿತ ಪ್ರಯಾಣದ ಹಿನ್ನಲೆ ಮಹಿಳೆಯರು ಅಂಜನಾದ್ರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ರಾಮ ಭಕ್ತ ಹನುಮನ ಖಜಾನೆ ಭರ್ತಿಯಾಗುತ್ತಿದೆ.
ಆಂಜನೇಯ ದೇಗುಲದ ಹುಂಡಿಯ ಎಣಿಕೆಯನ್ನು ಮಾಡಲಾಗಿದ್ದು ಒಟ್ಟು 26.57 ಲಕ್ಷ ರೂ.ಗಳ ಸಂಗ್ರಹವಾಗಿದೆ. ಇದರಲ್ಲಿ ದುಬೈ, ಮಲೇಶಿಯಾ ಹಾಗೂ ಅಮೇರಿಕಾದ 3 ವಿದೇಶಿ ನಾಣ್ಯಗಳಿವೆ. ಕಳೆದ ಮೇ 25 ರಂದು ಹುಂಡಿ ಎಣಿಕೆ ನಡೆಸಿದಾಗ 28.80 ಲಕ್ಷ ರೂ. ಸಂಗ್ರಹವಾಗಿತ್ತು. ಶಕ್ತಿ ಯೋಜನೆ ಬಳಿಕ ಮಹಿಳಾ ಭಕ್ತರು ಭೇಟಿ ಹೆಚ್ಚಾಗಿದೆ. ಕಳೆದ 40 ದಿನಗಳಲ್ಲಿ ಹುಂಡಿಯಲ್ಲಿ 26.57 ಲಕ್ಷ ರೂ.ಸಂಗ್ರಹವಾಗಿದೆ.
ಇದನ್ನೂ ಓದಿ : ಅಂಜನಾದ್ರಿ ಅಭಿವೃದ್ಧಿಗೆ 125 ಕೋಟಿ ರೂ. ಅನುಮೋದನೆ ದೊರೆತಿದೆ : ಬೊಮ್ಮಾಯಿ
ಸಿಸಿಟಿವಿ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ
ತಹಸೀಲ್ದಾರ್ ಮಂಜುನಾಥ ಸ್ವಾಮಿ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ಪ್ರಾರಂಭವಬಾಗಿತ್ತು. ತಾಲೂಕು ಆಡಳಿತದ ಸಮ್ಮುಖದಲ್ಲಿ, ಸಂಪೂರ್ಣ ಸಿಸಿಟಿವಿ ಕಣ್ಗಾವಲು ಹಾಗೂ ವೀಡಿಯೋ ಚಿತ್ರಿಕರಣದ ಮೂಲಕ ಹುಂಡಿ ಎಣಿಕೆ ಕಾರ್ಯ ನಡೆದಿದೆ.
ಶಿರಸ್ತೇದಾರಾದ ಆನಂತ ಜೋಶಿ, ರವಿಕುಮಾರ ನಾಯಕವಾಡಿ, ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಹೇಶ್ ದಲಾಲ, ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿ, ಕವಿತಾ ಸಾಣಾಪೂರ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ, ಪೋಲಿಸ್ ಸಿಬ್ಬಂದಿ ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿ ಹಾಗೂ ಭಕ್ತರಿದ್ದರು.