Wednesday, January 22, 2025

ನಾವು ಇನ್ನು ಸತ್ತಿಲ್ಲ, ಬದುಕಿದ್ದೀವಿ : ಡಾ.ಕೆ ಸುಧಾಕರ್ ಟಾಂಗ್

ಚಿಕ್ಕಬಳ್ಳಾಪುರ : ನಾವು ಇನ್ನು ಸತ್ತಿಲ್ಲ, ಬದುಕಿದ್ದೀವಿ ಎಂದು ಮಾಜಿ ಸಚಿವ ಡಾ.ಕೆ ಸುಧಾಕರ್ ಕಾಂಗ್ರೆಸ್ ನಾಯಕರ ಹೇಳಿಕೆಗೆ ಟಾಂಗ್ ಕೊಟ್ಟರು.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಡಳಿತ ವಿರೋಧಿ ಅಲೆ, ಗ್ಯಾರಂಟಿ ಯೋಜನೆಗಳಿಂದ ನಮಗೆ ಸೋಲಾಗಿರಬಹುದು ಎಂದು ಬೇಸರಿಸಿದರು.

2018 ಹಾಗೂ 2023ರ ಚುನಾವಣೆ ಫಲಿತಾಂಶ ಹೋಲಿಕೆ ಮಾಡಿದಾಗ ಬಿಜೆಪಿ ಪಕ್ಷಕ್ಕೆ ಮತ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮೂರು ಜಿಲ್ಲೆಗಳಲ್ಲಿ 8ರಿಂದ 10 ಸ್ಥಾನ ಗೆಲ್ಲಲಿದ್ದೇವೆ. ಆರು ತಿಂಗಳವರೆಗೂ ಸರ್ಕಾರದ ವಿರುದ್ಧ ನಾನು ಮಾತನಾಡಲ್ಲ. ನಮ್ಮ ಜಿಲ್ಲೆಗೆ ಅನ್ಯಾಯ ಆಗುತ್ತಿದೆ. ಹಾಗಾಗಿ, ನಾನು ಮಾತಾಡುತ್ತಿದ್ದೇನೆ ಎಂದು ನಯವಾಗಿಯೇ ಶಾಸಕ ಪ್ರದೀಪ್ ಈಶ್ವರ್​ಗೆ ಟಕ್ಕರ್ ಕೊಟ್ಟರು.

ಇದನ್ನೂ ಓದಿ : ಸುಮ್ನೆ ಹಿಟ್​ ಅಂಡ್​​ ರನ್​ ಬೇಡ : ಹೆಚ್ಡಿಕೆಗೆ ಪ್ರಿಯಾಂಕ್​ ಖರ್ಗೆ ಟಾಂಗ್

ಎಂಪಿ ಎಲೆಕ್ಷನ್​ಗೆ ನಿಲ್ತಿನೋ, ಇಲ್ಲವೋ

ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರದಿಂದ ಸುಧಾಕರ್ ಸ್ಪರ್ಧೆ ಮಾಡಲಿದ್ದಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಷೇತ್ರದ ಜನರ ತೀರ್ಮಾನಕ್ಕೆ ನಾನು ತಲೆ ಬಾಗುತ್ತೇನೆ‌. ಊಹಾಪೋಹಗಳಿಗೆ ನಾನು ಉತ್ತರ ಕೊಡುವುದಿಲ್ಲ. ಸ್ಪರ್ಧೆ ಮಾಡುತ್ತೇನೋ, ಇಲ್ಲವೋ ಅಂತ ಗೊತ್ತಿಲ್ಲ ಎಂದು ಸುಧಾಕರ್ ಅಡ್ಡ ಗೋಡೆಯ ಮೇಲೆ ದೀಪ ಇಟ್ಟರು.

ನಾನೇ ರೇಣುಕಾಚಾರ್ಯ ಜೊತೆ ಮಾತಾಡ್ತೀನಿ

ಬಿಜೆಪಿ ಪ್ರಣಾಳಿಕೆ ವಿಚಾರವಾಗಿ ಸುಧಾಕರ್ ವಿರುದ್ದ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಟೀಕೆ ಮಾಡಿರುವ ಬಗ್ಗೆ ಮಾತನಾಡಿ, ರೇಣುಕಾಚಾರ್ಯ ಅವರಿಗೆ ಮಾಹಿತಿ ಕೊರತೆ ಇದೆ. ನಮ್ಮ ಜೊತೆ ಇನ್ನೂ 15 ಜನ ಸದಸ್ಯರು ಇದ್ದರು. ಪಕ್ಷದಲ್ಲಿ ಸಿದ್ದಾಂತ, ಆಶಯ, ಕೆಲ ನಿಯಾಮಾವಳಿಗಳಿವೆ. ಯಾವಾಗ ಪ್ರಣಾಳಿಕೆ ಬಿಡುಗಡೆ ಮಾಡಬೇಕು ಅಂತ ದೊಡ್ಡವರ ಮಟ್ಟದಲ್ಲಿ ತೀರ್ಮಾನ ಆಗಿದೆ. ಅದು ನನ್ನ ವೈಯಕ್ತಿಕ ತೀರ್ಮಾನ ಅಲ್ಲ. ನಾನೇ ರೇಣುಕಾಚಾರ್ಯ ಜೊತೆ ವೈಯುಕ್ತಿಕವಾಗಿ ಮಾತನಾಡುತ್ತೇನೆ ಎಂದರು.

RELATED ARTICLES

Related Articles

TRENDING ARTICLES