Monday, May 13, 2024

ಕೇಂದ್ರ ಕರ್ನಾಟಕದ ವಿರೋಧಿಯಾಗಿ ನಡೆದುಕೊಳ್ತಿಲ್ಲ : ಮೋದಿ ಪರ ಪ್ರಜ್ವಲ್ ಬ್ಯಾಟಿಂಗ್

ಹಾಸನ : ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ವಿರೋಧಿಯಾಗಿ ನಡೆದುಕೊಳ್ಳುತ್ತಿಲ್ಲ ಎನ್ನುವ ಮೂಲಕ ಬಿಜೆಪಿ ಸರ್ಕಾರದ ಪರ ಸಂಸದ ಪ್ರಜ್ವಲ್ ರೇವಣ್ಣ ಬ್ಯಾಟ್ ಬೀಸಿದರು+.

ಅನ್ನಭಾಗ್ಯ ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರವನ್ನ ಹೊಣೆ ಮಾಡುತ್ತಿರುವ ಕಾಂಗ್ರೆಸ್ ವಿಚಾರ ಕುರಿತು ಹಾಸನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನನಗೆ ಈ ವಿಚಾರ ಸಂಬಂಧಿಸಿದ್ದಲ್ಲ. ನಾವು ಕೇಂದ್ರದಲ್ಲೂ ಇಲ್ಲ, ರಾಜ್ಯದಲ್ಲೀ ಅಧಿಕಾರದಲ್ಲಿ ಇಲ್ಲ. ಆದರೆ, ಚುನಾವಣೆಗೆ ಹೋದಂತಹ ಸಂದರ್ಭದಲ್ಲಿ ನಾವು ಕೊಟ್ಟ ಭರವಸೆಗಳನ್ನು ನಾವೇ ಈಡೇರಿಸಬೇಕು. ಅದನ್ನು ಬೇರೆಯವರು ಈಡೇರಿಸಲಿ ಎಂಬ ನಿರೀಕ್ಷೆ ಮಾಡಬಾರದು ಎಂದು ನಯವಾಗಿಯೇ ಕಾಂಗ್ರೆಸ್ ನಾಯಕರಿಗೆ ಟಕ್ಕರ್ ಕೊಟ್ಟರು.

ಹೆಚ್.ಡಿ ಕುಮಾರಸ್ವಾಮಿಯವರು ಭರವಸೆ ಕೊಟ್ಟಿದ್ದರೆ ಅವರೇ ಈಡೇರಿಸಬೇಕು. ರೈತರ ಸಾಲ ಮನ್ನಾ ವಿಚಾರದಲ್ಲಿ ಕುಮಾರಸ್ವಾಮಿಯವರು ಕೇಂದ್ರವನ್ನು ಕೇಳಲಿಲ್ಲ. ಅನುದಾನ ಕೊಡಿ ನಾವು ರೈತರ ಸಾಲ ಮನ್ನಾ ಮಾಡಬೇಕು ಅಂತ ಕೇಂದ್ರ ಸರ್ಕಾರವನ್ನು ಕೇಳಲಿಲ್ಲ. ಅವರವರ ಭರವಸೆಗಳನ್ನು ಅವರೇ ಪೂರೈಸಬೇಕು ಎನ್ನುವ ಮೂಲಕ ಪರೋಕ್ಷವಾಗಿ ಗ್ಯಾರಂಟಿಗಳನ್ನು ರಾಜ್ಯವೇ ಈಡೇರಿಸಬೇಕು ಎಂದರು.

ಇದನ್ನೂ ಓದಿ : ದಿಲ್ಲಿಯಲ್ಲಿ ಕುಳಿತ ‘ಒಂದು ಫ್ಯಾಮಿಲಿ’ ಕರ್ನಾಟಕವನ್ನು ನಂ.1 ಎಟಿಎಂ ಮಾಡಲು ಹೊರಟಿದೆ : ಪ್ರಧಾನಿ ಮೋದಿ

ಬಿಜೆಪಿಯವ್ರು ಯಾಕೆ ಈಡೇರಿಸುತ್ತಾರೆ?

ನಾವು ಕಾಂಗ್ರೆಸ್ ಗ್ಯಾರಂಟಿಗಳನ್ನು ಒಪ್ಪಿದ್ದೇವೆ. ಆದರೆ, ಕೇಂದ್ರದವರು ಅಕ್ಕಿ ಕೊಡುತ್ತಿಲ್ಲ ಅನ್ನೋದು ಎಷ್ಟು ಸರಿ? ಅವ್ರ ಭರವಸೆನಾ ಅವ್ರ ಸರ್ಕಾರ ಅಧಿಕಾರದಲ್ಲಿ ಇರೋವಾಗ ಈಡೇರಿಸಬೇಕು. ಬಿಜೆಪಿಯವರು ಯಾಕೆ ಈಡೇರಿಸುತ್ತಾರೆ? ಕೇಂದ್ರ ಮಾಡಿಕೊಂಡಿರುವ ಕಾನೂನಂತೆ, ರಾಜ್ಯದ ವಿರೋಧಿಯಾಗಿ ಅವ್ರು ನಡೆದುಕೊಳ್ಳುತ್ತಿಲ್ಲ. ಕೇಂದ್ರ ಕಾನೂನು ಮಾಡಿದರೆ, ಅದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. 28 ರಾಜ್ಯಗಳಿಗೂ ಆ ಕಾನೂನು ಸೀಮಿತವಾಗಿರುತ್ತದೆ. ಇವ್ರು ಪತ್ರ ಬರೆಯುವುದಕ್ಕೂ ಮುಂಚೆ ಎಫ್ ಸಿಐನವರು ತೀರ್ಮಾನ ಮಾಡಿದ್ದಾರೆ. ಕಾನೂನು ಮಾಡಿದ್ದಾರೆ. ಪತ್ರ ಬರೆದ ಬಳಿಕ ಏನಾದ್ರೂ ಕಾನೂನು ಮಾಡಿದ್ರೆ ಅದು ಉದ್ದೇಶಪೂರ್ವಕವಾಗಿ ಅನ್ನಬಹುದು ಎಂದು ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಹೇಗಾದ್ರೂ ಮಾಡಿ ಅಕ್ಕಿ ತಂದು ಕೊಡ್ಲಿ

10 ಕಿಲೋ ಅಕ್ಕಿ ಕೊಡುತ್ತೇವೆ ಅಂತ ಭರವಸೆ ಕೊಟ್ಟಿರುವುದು ಇವ್ರು. 5 ಕಿಲೋ ಅಕ್ಕಿ ಬಿಜೆಪಿಯವರು ಕೊಡುವುದಲ್ಲದೆ ನಾವೇ 10 ಕಿಲೋ ಕೊಡ್ತೇವೆ ಅಂತ ಹೇಳಿದ್ರು. ಇವತ್ತು ಕೇಂದ್ರ 5 ಕಿಲೋ, ರಾಜ್ಯ 5 ಕಿಲೋ ಅಂತ ಹೇಳ್ತಿದ್ದಾರೆ. 10 ಕಿಲೋ ಹೋಗಲಿ, ಆ 5 ಕಿಲೋ ಅಕ್ಕಿಯನ್ನಾದರೂ ಕೇಂದ್ರ ಕೊಡಲಿ ಅಂತ ಯಾಕೆ ನೀರಿಕ್ಷೆ ಮಾಡ್ಬೇಕು. ಇವ್ರು ತೀರ್ಮಾನ ಮಾಡಿ ಗ್ಯಾರಂಟಿ ಕೊಟ್ಟಿರೋದು. ಹೇಗಾದ್ರೂ ಮಾಡಿ ಅಕ್ಕಿ ತಂದು ಕೊಡಲಿ ಎಂದು ಪ್ರಜ್ವಲ್ ರೇವಣ್ಣ ಚಾಟಿ ಬೀಸಿದರು.

RELATED ARTICLES

Related Articles

TRENDING ARTICLES