Friday, May 17, 2024

ದಿಲ್ಲಿಯಲ್ಲಿ ಕುಳಿತ ‘ಒಂದು ಫ್ಯಾಮಿಲಿ’ ಕರ್ನಾಟಕವನ್ನು ನಂ.1 ಎಟಿಎಂ ಮಾಡಲು ಹೊರಟಿದೆ : ಪ್ರಧಾನಿ ಮೋದಿ

ಬೆಂಗಳೂರು : ಡೆಲ್ಲಿಯಲ್ಲಿ ಕುಳಿತ ಒಂದು ಕುಟುಂಬ ಕರ್ನಾಟಕವನ್ನು ನಂ.1 ಎಟಿಎಂ ಮಾಡಿಕೊಳ್ಳುವುದಕ್ಕೆ ಚಿಂತನೆ ನಡೆಸಿದೆ. ಇದಕ್ಕಾಗಿ ರಾಜ್ಯ ಕಾಂಗ್ರೆಸ್‌ನವರು ಮತ ಕೇಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಮುಲ್ಕಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ತುಳು ಭಾಷೆಯಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳುವಪ್ಪೆ ಜೋಕುಲೇಗ್ ಸೊಲ್ಮೆಲು. ಪರಶುರಾಮ ಕ್ಷೇತ್ರದ ನನ್ನ ಪ್ರೀತಿಯ, ತುಳು ತಾಯಿಯ ಮಕ್ಕಳಿಗೆಲ್ಲ ನಮಸ್ಕಾರಗಳು ಎಂದರು.

ಮತದಾನದ ದಿನ ದೂರವಿಲ್ಲ. ದೇಶದಲ್ಲಿ ಕರ್ನಾಟಕವನ್ನು ನಂ.1 ಮಾಡುತ್ತೇವೆ. ಇದು ಡಬಲ್‌ ಎಂಜಿನ್‌ ಸರ್ಕಾರದಿಂದ ಮಾತ್ರ ಸಾಧ್ಯ. ಕರ್ನಾಟಕಕ್ಕೆ ಮೂಲಸೌಕರ್ಯ ಒದಗಿಸುವ ಮೂಲಕ ಸೂಪರ್‌ಪವರ್‌ ರಾಜ್ಯವನ್ನಾಗಿ ಮಾಡಲಾಗುವುದು. ಕರ್ನಾಟಕದ ಜನರು ಮತ ಹಾಕುವ ಮುನ್ನ ಯೋಚನೆ ಮಾಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಕಾಂಗ್ರೆಸ್ ಶಾಂತಿ, ಅಭಿವೃದ್ಧಿಯ ವಿರೋಧಿ

ಕರ್ನಾಟಕದಲ್ಲಿ ಕಳೆದ ನಾಲ್ಕು ದಿನಗಳಿಂದ ಚಿಕ್ಕ ಚಿಕ್ಕ ಮಕ್ಕಳ ಪ್ರೀತಿ ಕಾಣುತ್ತಿದ್ದೇನೆ. ಅಕ್ಕ ತಂಗಿಯರು ಮಾತೆಯರ ಅಶೀರ್ವಾದ ಕಾಣುತ್ತಿದ್ದೇನೆ. ಯುವಕರ ಹುಮ್ಮಸ್ಸು ಕಾಣುತ್ತಿದ್ದೇನೆ. ರೈತರ ಕಣ್ಣಲ್ಲಿ ಉತ್ಸಾಹ ಕಾಣುತ್ತಿದ್ದೇನೆ. ಈ ಬಾರಿ ಬಹುಮತದ ಸ್ಥಿರ ಬಿಜೆಪಿ ಸರ್ಕಾರ ತರಬೇಕು. ಕಾಂಗ್ರೆಸ್ ಶಾಂತಿಯ ವಿರೋಧಿ, ಕಾಂಗ್ರೆಸ್ ಅಭಿವೃದ್ಧಿಯ ವಿರೋಧಿ. ಕಾಂಗ್ರೆಸ್ ಆತಂಕವಾದಿಗಳ ರಕ್ಷಣೆಗೆ ನಿಲ್ಲುತ್ತದೆ, ಕೇವಲ ತುಷ್ಟೀಕರಣ ಮಾಡುತ್ತದೆ ಎಂದು ಗುಡುಗಿದರು.

ಕಾಂಗ್ರೆಸ್‌ ಸೈನಿಕರಿಗೆ ಅವಮಾನ ಮಾಡ್ತಿದೆ

ದೇಶದ ಜನರು ಸೈನಿಕರ ಸಾಹಸ ನೋಡಿ ಹೆಮ್ಮೆಪಡುತ್ತಾರೆ. ಆದರೆ, ಕಾಂಗ್ರೆಸ್‌ ನಮ್ಮ ಸೈನಿಕರಿಗೆ ಅವಮಾನ ಮಾಡುತ್ತಿದೆ. ಭಯೋತ್ಪಾದಕರು ಸತ್ತಾಗ ಕಣ್ಣೀರು ಹಾಕುತ್ತದೆ. ಅಸ್ಸಾಂ, ಗುಜರಾತ್‌, ಜಮ್ಮು ಕಾಶ್ಮೀರದ ಜನರು ಜೈ ಕರ್ನಾಟಕ ಎಂದು ಕೂಗಬೇಕು. ಬೇರೆ ರಾಜ್ಯಗಳ ಜನರು ಜೈಕಾರ ಹಾಕಬೇಕು ಎಂದರೆ ಕರ್ನಾಟಕದಲ್ಲಿ ಸ್ಥಿರ, ಬಹುಮತದ ಸರ್ಕಾರ ಬರಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಪ್ರತಿ ಯೋಜನೆಯಲ್ಲಿ 85% ಕಮಿಷನ್

ಡಬಲ್ ಎಂಜಿನ್ ಸರ್ಕಾರ ಮಹಿಳೆಯರಿಗಾಗಿ ಹಲವು ಯೋಜನೆ ರೂಪಿಸುತ್ತಿದೆ. ಮುದ್ರಾ ಯೋಜನೆಯ ಹೆಚ್ಚಿನ ಫಲಾನುಭವಿಗಳು ಮಹಿಳೆಯರು. ಈ ಮೂಲಕ ದೇಶದ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದೆ. ಪ್ರತಿ ಯೋಜನೆಯಲ್ಲಿ 85% ಕಮಿಷನ್ ಪಡೆಯುವ ಕಾಂಗ್ರೆಸ್ ಕರ್ನಾಟಕದ ಅಭಿವೃದ್ಧಿಯನ್ನು ದಶಕಗಳಷ್ಟು ಹಿಂದೆ ತೆಗೆದುಕೊಂಡು ಹೋಗಿದೆ. ಕಾಂಗ್ರೆಸ್ ಪಕ್ಷದಿಂದ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಛೇಡಿಸಿದರು.

RELATED ARTICLES

Related Articles

TRENDING ARTICLES