Monday, December 23, 2024

ಚಂದ್ರಗುತ್ತಿಯಲ್ಲಿ ನಾರಿ ಶಕ್ತಿ : ರೇಣುಕಾಂಬೆಯ ದರ್ಶನ ಪಡೆದ ಸಾವಿರಾರು ಭಕ್ತರು

ಶಿವಮೊಗ್ಗ : ಜಿಲ್ಲೆಯ ಐತಿಹಾಸಿಕ ಹಾಗೂ ಪುರಾಣಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಗುರುಪೂರ್ಣಿಮೆಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದರು.

ಸೊರಬ ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್‌, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು ಹಾಗೂ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದರು.

ಸುರಿಯುವ ಜಿಟಿಜಿಟಿ ಮಳೆಯನ್ನು ಲೆಕ್ಕಿಸದೇ ಮಲೆನಾಡಿನ ಆರಾಧ್ಯ ದೇವಿ ರೇಣುಕಾದೇವಿಯ ದರ್ಶನ ಪಡೆದು ಉಧೋ ಉಧೋ ಎಂದು ಜೈಕಾರ ಹಾಕಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಈ ವೇಳೆ, ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ ತ್ರಿಶೂಲದ ಭೈರಪ್ಪ ದೇವರು ಹಾಗೂ ತೊಟ್ಟಿಲು ಬಾವಿಗೆ ಹುಣ್ಣಿಮೆಯ ವಿಶೇಷ ಪೂಜೆ ಸಲ್ಲಿಸಲಾಯಿತು.

ಇದನ್ನೂ ಓದಿ : ರಾಜಕೀಯ ಪಕ್ಷಗಳನ್ನು ಒಡೆಯಲು ಮೋದಿ ಸರ್ಕಾರಕ್ಕೆ ಪೂರ್ತಿ ಸಮಯವಿದೆ ; ಮಲ್ಲಿಕಾರ್ಜುನ ಖರ್ಗೆ ಟೀಕೆ

ರಾಜ್ಯ ಸರ್ಕಾರ ರಾಜ್ಯದಾದ್ಯಂತ ಮಹಿಳೆಯರಿಗೆ “ಶಕ್ತಿ” ಯೋಜನೆ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡು ಧಾರ್ಮಿಕ ಸ್ಥಳದಲ್ಲಿಂದು ನಾರಿ ಶಕ್ತಿ ಪ್ರದರ್ಶನವಾಯಿತು.

ಅಲ್ಲದೆ ಈ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ದರ್ಶನಕ್ಕೆ ಬಯಲು ಸೀಮೆ ಮತ್ತು ಉತ್ತರ ಕರ್ನಾಟಕ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸುತ್ತಿದುದ್ದು ವಿಶೇಷವಾಗಿತ್ತು.

ಈ ಹುಣ್ಣಿಮೆಯ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೆಚ್ಚಿನ ಸರ್ಕಾರಿ ಬಸ್ ವ್ಯವಸ್ಥೆಯನ್ನು ಸಾರಿಗೆ ಇಲಾಖೆಯಿಂದ ಕಲ್ಪಿಸಲಾಗಿತ್ತು.

 

RELATED ARTICLES

Related Articles

TRENDING ARTICLES