ನವದೆಹಲಿ : ನನ್ನನ್ನ ಯಾರು ಟಾರ್ಗೆಟ್ ಮಾಡಿಲ್ಲ, ನನಗೆ ಎಲ್ಲಾ ಗೌರವ ಸಿಕ್ಕಿದೆ, ನಾನು ಸಂತೋಷವಾಗಿದ್ದೇನೆ, ಕೇಂದ್ರದ ನಾಯಕರು ಸಹ ನನ್ನ ಜೊತೆ ಒಳ್ಳೆ ರೀತಿಯಲ್ಲಿ ನಡೆದುಕೊಳ್ತಿದ್ದಾರೆ ಎಂದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದರು.
ನವದೆಹಲಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಭೇಟಿಯಾಗೋಕೆ ಹೇಳಿದ್ದಾರೆ. ಇವತ್ತು ರಾತ್ರಿ 8 ಗಂಟೆಗೆ ವರಿಷ್ಠರನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದರು.
ರಾಜ್ಯದ ಅಭಿವೃದ್ದಿಯ ಬಗ್ಗೆ ವರಿಷ್ಟರು ಏನೇನು ಸಲಹೆಗಳನ್ನು ನೀಡುತ್ತಾರೆ ಎಂಬುವುದನ್ಮು ಚರ್ಚಿಸುತ್ತೇನೆ ಎಂದು ಮಾಹಿತಿ ನೀಡಿದರು.
ವಿಪಕ್ಷ ನಾಯಕನ ಆಯ್ಕೆಯೂ ಸೇರಿದಂತೆ ಅನೇಕ ವಿಚಾರಗಳನ್ನು ನನ್ನೊಂದಿಗೆ ವರಿಷ್ಟರು ಚರ್ಚೆ ಮಾಡಬಹುದು ಎಂದು ಭಾವಿಸಿದ್ದೇನೆ,ಬಹುತೇಕ ಎಲ್ಲಾ ವಿಷಯಗಳು ಸಭೆಯಲ್ಲಿ ಪ್ರಸ್ತಾಪವಾಗು ಸಾಧ್ಯತೆಗಳಿವೆ ಎಂದು ಯಡಿಯೂರಪ್ಪ ಸುಳಿವು ನೀಡಿದರು.
ಇದನ್ನೂ ಓದಿ : YST ಮಾತ್ರವಲ್ಲ, VST ಟ್ಯಾಕ್ಸ್ ಕೂಡ ಇದೆ : ರವಿಕುಮಾರ್ ಕಿಡಿ
ನಮ್ಮ ಪಕ್ಷದಲ್ಲಿ ಯಾವುದೇ ಆಂತರಿಕ ಭಿನ್ನಮತವಿಲ್ಲ, ಪಕ್ಷಕ್ಕೆ ಹಾನಿಯಾಗುವಂತೆ ಮಾತನಾಡಬಾರದೆಂದು ಎಲ್ಲರಿಗೂ ಕರೆಸಿ ಹೇಳಿದ್ದೇವೆ ಎಂದ ಅವರು ಎಲ್ಲವೂ ಸರಿ ಹೋಗುತ್ತದೆ ನಾವು ಸರಿ ಪಡಿಸುತ್ತೇವೆ ಎಂದು ಡ್ಯಾಮೇಜ್ ಕಂಟ್ರೋಲ್ಗೆ ಯಡಿಯೂರಪ್ಪ ಮುಂದಾದರು.
ರೇಣುಕಾಚಾರ್ಯ ಅಸಮಾಧಾನದ ಕುರಿತು ಪ್ರತಿಕ್ರಿಯೆಗೆ ನಕಾರ ವ್ಯಕ್ತಪಡಿಸಿ, ಅದ್ಯಾವುದಕ್ಕೂ ನಾನು ಪ್ರತಿಕ್ರಿಯೆ ನೀಡೋಕೆ ಇಷ್ಟ ಪಡುವುದಿಲ್ಲ. ಆಗಿರುವುದೆಲ್ಲದಕ್ಕೆಲ್ಲ ಉತ್ತರ ಸಿಕ್ಕಿದೆ ಅವರು ಕೂಡ ಸುಧಾರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ಪುತ್ರ ಸಂಸದ ಬಿ.ವೈ.ರಾಘವೇಂದ್ರಗೆ ಕೇಂದ್ರ ಸಚಿವಸ್ಥಾನದ ವಿಚಾರ ಕೇಂದ್ರದ ನಾಯಕರಿಗೆ ಬಿಟ್ಟಿದ್ದು ಅವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಯಡಿಯೂರಪ್ಪ ನುಡಿದರು.