ದೆಹಲಿ : ಶಿವಮೊಗ್ಗ, ಮಂಗಳೂರಿನಲ್ಲಿ ಐಸಿಸ್ ಪ್ರೇರಿತ ಉಗ್ರರ ಬಾಂಬ್ ಟ್ರಯಲ್ ಪ್ರಕರಣದಲ್ಲಿ ಕುಕ್ಕರ್ ಬ್ಲಾಸ್ಟ್ ಆರೋಪಿ ಮಹಮ್ಮದ್ ಶಾರೀಕ್ ಸೇರಿ ಒಂಬತ್ತು ಮಂದಿ ವಿರುದ್ಧ ಎನ್ಐಎ ಅಧಿಕಾರಿಗಳ ತಂಡ ಚಾರ್ಜ್ ಶೀಟ್ ಸಲ್ಲಿಸಿದೆ.
ಶಿವಮೊಗ್ಗದ ತುಂಗಾ ನದಿ ಮತ್ತು ಬಂಟ್ವಾಳದ ನೇತ್ರಾವತಿ ತೀರದಲ್ಲಿ ಬಾಂಬ್ ಟ್ರಯಲ್ ಮಾಡಿದ್ದ ಉಗ್ರರಾದ ಮಹಮ್ಮದ್ ಶಾರೀಕ್(25), ಮಾಜ್ ಮುನೀರ್ ಅಹ್ಮದ್(23), ಸೈಯದ್ ಯಾಸೀನ್(22), ರೀಶಾನ್ ತಾಜುದ್ದೀನ್ ಶೇಖ್ (22), ಹುಝೈನ್ ಫರ್ಹಾನ್ ಬೇಗ್ (22), ಮಜೀನ್ ಅಬ್ದುಲ್ ರಹಿಮಾನ್ (22), ನದೀಂ ಅಹ್ಮದ್ ಕೆ.ಎ.(22), ಜಬೀವುಲ್ಲಾ(32), ನದೀಮ್ ಫೈಸಲ್ (27) ವಿರುದ್ಧ ಚಾರ್ಜ್ ಶೀಟ್ ನಲ್ಲಿ ಹೆಚ್ಚುವರಿ ಆರೋಪಪಟ್ಟಿಯಲ್ಲಿ ಆರೋಪಿಗಳ ವಿರುದ್ಧ ದೇಶದ್ರೋಹ ಕಾಯ್ದೆ, ಸಾರ್ವಜನಿಕ ಆಸ್ತಿ ಹಾನಿ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಐವರು ಮೆಕ್ಯಾನಿಕಲ್ ಮತ್ತು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪೂರೈಸಿದ್ದು ತಾಂತ್ರಿಕ ಪರಿಣತಿ ಹೊಂದಿದ್ದರು. ಈ ಐವರು ಆರೋಪಿಗಳಿಗೆ ಮೊಹಮ್ಮದ್ ಶಾರೀಕ್, ಮಾಜ್ ಮುನೀರ್, ಸೈಯದ್ ಯಾಸೀನ್ ರೋಬೋಟಿಕ್ ಕೋರ್ಸ್ ಕಲಿಯಲು ಪ್ರೇರಣೆ ನೀಡುತ್ತಿದ್ದರು, ಐಸಿಸ್ ಸೂಚನೆಯಂತೆ ಭವಿಷ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಡ್ರೋಣ್, ರೋಬೋಟ್ ಬಳಸಲು ಟಾರ್ಗೆಟ್ ನೀಡಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು ಮತ್ತು ಐಸಿಸ್ ಸಂಘಟನೆಯೂ ಆರೋಪಿಗಳಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸು ವ್ಯವಸ್ಥೆಯನ್ನು ಪೂರೈಸುತ್ತಿತ್ತು ಎಂದು ದೆಹಲಿ ವಿಭಾಗದ ಎನ್ಐಎ ಅಧಿಕಾರಿಗಳ ತಂಡ ಪ್ರಕರಣದ ತನಿಖೆ ಬಗ್ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.