Friday, January 10, 2025

‘ಎಣ್ಣೆ’ ಏಟಲ್ಲಿ ಸ್ನೇಕ್ ಜೊತೆ ಫೈಟ್ : ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದಾಗ ಥಟ್ಟನೆ ಎದ್ದು ಕೂತ ಭೂಪ!

ಗದಗ : ಕೈ ಮೇಲೆ ಗರುಡರೇಖೆ ಇದೆ ಎಂಬ ಹುಚ್ಚಾಟ. ಬರಿಗೈಯಲ್ಲಿಯೇ ಹಾವು ಹಿಡಿಯುವ ಸಾಹಸ. ನಾಲ್ಕು ಬಾರಿ ಹಾವಿನಿಂದ ಕಚ್ಚಿಸಿಕೊಂಡು ಆಸ್ಪತ್ರೆ ಬೆಡ್ ನಲ್ಲಿ ಸಾವು ಬದುಕಿನೊಂದಿಗೆ ಹೋರಾಟ. ಇನ್ನೇನು ಸತ್ತೇ ಹೋದ ಅಂತ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದ ಗ್ರಾಮಸ್ಥರು. ಆಗ ನಡೆದದ್ದೇ ಮಿರಾಕಲ್!

ಹೌದು, ಹಾವು ಕಚ್ಚಿ ಆಸ್ಪತ್ರೆ ಸೇರಿದ್ದ ವ್ಯಕ್ತಿ ಮೃತಪಟ್ಟ ಅಂತ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದಾಗ ಇಲ್ಲೊಬ್ಬ ಥಟ್ಟನೆ ಭೂಪ ಎದ್ದು ಕೂತಿದ್ದಾನೆ. ಸಿದ್ದಪ್ಪ ಎಂಬ ವ್ಯಕ್ತಿಯೇ ಹಾವು ಕಚ್ಚಿದರೂ ಬದುಕುಳಿದಿರುವ ಗಟ್ಟಿ ಗುಂಡಿಗೆಯ ಗಂಡು. ಈ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪದಲ್ಲಿ ನಡೆದಿದೆ.

ಹಿರೇಕೊಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಈ ವೇಳೆ ಹಾವೊಂದು ಪ್ರತ್ಯಕ್ಷವಾಗಿತ್ತು. ಆಗ ಎಣ್ಣೆ ಏಟಲ್ಲಿದ್ದ ಸಿದ್ದಪ್ಪ, ಬರಿಗೈಯಲ್ಲೇ ಹಾವು ಹಿಡಿದಿದ್ದಾನೆ. ಗ್ರಾಮಸ್ಥರು ಎಷ್ಟೇ ಹೇಳಿದ್ರೂ ರಚ್ಚೆ ಹಿಡಿದ ಈತ, ತನ್ನ ಕೈಯಲ್ಲಿ ಗರುಡರೇಖೆ ಇದೆ,‌ ನನಗೇನೂ ಆಗಲ್ಲ ಅಂತ ನಾಗರಾಜನೊಂದಿಗೆ ಚೆಲ್ಲಾಟ ಆಡಿದ್ದಾನೆ.

ಇದನ್ನೂ ಓದಿ : 41ರ ಆಂಟಿ ಜೊತೆ ಪೊಲೀಸಪ್ಪನ ಸಂಬಂಧ : ಮದುವೆಗೆ ಪಟ್ಟು ಹಿಡಿದಿದ್ದಕ್ಕೆ ಪರಾರಿ!

ಸಾವನ್ನಪ್ಪಿದ್ದವ ಥಟ್ಟನೆ ಎದ್ದಿದ್ದೆ ಪವಾಡ

ಸಿದ್ದಪ್ಪನ ಹುಚ್ಚಾಟದಿಂದ ಹಾವು ನಾಲ್ಕು ಬಾರಿ ಆತನಿಗೆ ಕಚ್ಚಿತ್ತು. ಕೂಡಲೇ ಸ್ಥಳೀಯರು ಸಿದ್ದಪ್ಪನನ್ನು ನರಗುಂದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಈ ವೇಳೆ ಗ್ರಾಮದಲ್ಲಿ ಸಿದ್ದಪ್ಪ ಸಾವನ್ನಪ್ಪಿದ್ದಾನೆ ಅಂತ ಸುಳ್ಳು ಸುದ್ದಿ ಹಬ್ಬಿತ್ತು. ಆಗ ನಡೆದದ್ದೇ ಪವಾಡ. ಬೆಡ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಪ್ಪ ಥಟ್ಟನೆ ಎದ್ದು ಕೂತಿದ್ದಾನೆ.

ಸಿದ್ದಪ್ಪ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಸುದ್ದಿ ತಿಳಿದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸಿದ್ದಪ್ಪನ ಕೈ ಮೇಲಿದ್ದ ಗರುಡರೇಖೆ ಈತನನ್ನು ಬದುಕಿಸಿದೆ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ. ಒಟ್ನಲ್ಲಿ, ಎಣ್ಣೆ ಏಟಲ್ಲಿ ಸ್ನೇಕ್ ಜೊತೆ ಫೈಟ್ ಮಾಡಿದ ಕುಡುಕ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

RELATED ARTICLES

Related Articles

TRENDING ARTICLES