ಬೆಂಗಳೂರು: ದಿನದಿಂದ ದಿನಕ್ಕೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (Bengaluru-Mysore Expressway) ಅಪಘಾತ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಇಲ್ಲಿ ಸಂಚಾರಿಸುವ ವಾಹನಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.
ಹೌದು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿರುವುದರಿಂದ ವೇಗ ಮಿತಿ 100 ಜಾರಿಗೊಳಿಸಲು ಪೊಲೀಸ್ ಇಲಾಖೆ ಪ್ಲ್ಯಾನ್ ಮಾಡಿಕೊಂಡಿದೆ. ಈ ಬಗ್ಗೆ ಎಡಿಜಿಪಿ ಅಲೋಕ್ ಮೋಹನ್ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.
ವೇಗವಾಗಿ ಸಂಚಾರಿಸುವ ವಾಹನ ಮೇಲೆ ದಂಡ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದಾಗಿನಿಂದಲೂ ಹೆಚ್ಚಿನ ಸಂಖ್ಯೆಯ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಡೆಗಟ್ಟಲು 119 ಕಿಲೋಮೀಟರ್ ವರೆಗಿನ ಹೆದ್ದಾರಿಯಲ್ಲಿ ಸ್ಪೀಡ್ ರಾಡಾರ್ ಗನ್ ಮತ್ತು ವಾಹನ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‌ಪಿಆರ್) ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಒಂದು ವೇಳೆ ವಾಹನ ಮಿತಿಗಿಂತ ವೇಗವಾಗಿ ಚಲಿಸುತ್ತಿದ್ದರೆ ಸ್ಪೀಡ್ ರಾಡಾರ್ ಗನ್ನಲ್ಲಿ ಸೆರೆಯಾಗಲಿದ್ದು, ವಾಹನ ಸಂಖ್ಯೆಗೆ ಮೇಲೆ ದಂಡ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
80 ಕಿಮೀ ನಿಂದ 100 ಕಿಮೀ ವೇಗದಲ್ಲಿ ಪ್ರಯಾಣಿಸುವಾಗ ಅಪಘಾತಗಳು ಸಂಭವಿಸುವಿದಿಲ್ಲ
ಎಕ್ಸ್‌ಪ್ರೆಸ್ ವೇಯನ್ನು ವಾಹನಗಳು ಗಂಟೆಗೆ 120 ಕಿಮೀ ಗರಿಷ್ಠ ವೇಗದ ಮಿತಿಯೊಂದಿಗೆ ಚಲಿಸಲು ವಿನ್ಯಾಸಗೊಳಿಸಲಾಗಿದೆ. 80 ಕಿಮೀ ನಿಂದ 100 ಕಿಮೀ ವೇಗದಲ್ಲಿ ಪ್ರಯಾಣಿಸುವಾಗ ಅಪಘಾತಗಳು ಸಂಭವಿಸುವುದಿಲ್ಲ. ಇಷ್ಟು ವೇಗದಲ್ಲಿ ಪ್ರಯಾಣಿಸಿದರೂ ಒಂದೂವರೆ ಗಂಟೆಯಲ್ಲಿ ಬೆಂಗಳೂರು ತಲುಪಬಹುದು.
ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ
ವರದಿಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಈ ಆರು ಪಥಗಳ ಮುಖ್ಯ ಹೆದ್ದಾರಿಯಲ್ಲಿ ದ್ವಿಚಕ್ರ, ಮತ್ತು ತ್ರಿಚಕ್ರ ವಾಹನಗಳನ್ನು ನಿಷೇಧಿಸಲು ತೀರ್ಮಾನಿಸಿದ್ದು, ಸರ್ವೀಸ್ ರಸ್ತೆಯಲ್ಲಿ ಮಾತ್ರ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುಲು ನಿರ್ಧರಿಸಿದೆ.