ಬೆಂಗಳೂರು: ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಶಾಲಾ ಶಿಕ್ಷಕರು ಕೂಡಲೇ ತಮ್ಮ ಮೂಲ ಶಾಲೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಹಾಜರಾಗದಿದ್ದರೆ ಅವರ ವೇತನ ತಡೆಹಿಡಿದು ಕರ್ತವ್ಯ ನಿರ್ಲಕ್ಷ್ಯದ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಶಾಲಾ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಈ ಸಂಬಂಧ ಇಲಾಖೆಯ ಆಯುಕ್ತ ಡಾ.ಆರ್.ವಿಶಾಲ್ ಅವರು ಮಂಗಳವಾರ ಜ್ಞಾಪನ ಪತ್ರ ಹೊರಡಿಸಿದ್ದು, ಇಲಾಖೆಯ DDPI, BEOಗಳು ನಿಯಮಬಾಹಿರವಾಗಿ ಶಿಕ್ಷಕರನ್ನು ಬೇರೆ ಶಾಲೆ, ಕಚೇರಿ, ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದ ಹಿನ್ನೆಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಆ ಎಲ್ಲಾ ನಿಯೋಜನೆಗಳನ್ನು ರದ್ದು ಪಡಿಸುವಂತೆ ಶಿಕ್ಷಣ ಇಲಾಖೆ ಆದೇಶ ನೀಡಿತ್ತು. ಆದರೆ, ಈ ಆದೇಶವನ್ನು ಪಾಲಿಸಿ ಮೂಲ ಶಾಲೆಗೆ ಕರ್ತವ್ಯಕ್ಕೆ ಹಿಂತಿರುಗದೆ ಕೆಲ ಶಿಕ್ಷಕರು ನಿರ್ಲಕ್ಷ್ಯ ವಹಿಸಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಇದನ್ನೂ ಓದಿ: ಕಲ್ಯಾಣ’ ಪ್ರಗತಿಗೆ ಅಧಿಕಾರಿಗಳೇ ಅಡ್ಡಿ
ಸರ್ಕಾರದಿಂದ ಆದೇಶವಾಗಿರುವ ಪ್ರಕರಣ ಹೊರತು ಪಡಿಸಿ ಉಳಿದೆಲ್ಲ ಶಿಕ್ಷಕರು ತಮ್ಮ ಮೂಲ ಶಾಲೆಗಳಿಗೆ ವಾಪಸ್ಸಾಗಬೇಕು ಎಂದು ಸೂಚಿಸಿದ್ದಾರೆ. DDPI, BEOಗಳು ತಮ್ಮ ವ್ಯಾಪ್ತಿಯ ನಿಯೋಜಿತ ಶಿಕ್ಷಕರು ಮೂಲ ಶಾಲೆಗೆ ಹಿಂತಿರುಗಿ ಕರ್ತವ್ಯಕ್ಕೆ ಹಾಜರಾಗಿರುವ ಬಗ್ಗೆ ಜಿಲ್ಲಾವಾರು ಶಿಕ್ಷಕರ ಪಟ್ಟಿಯನ್ನು ಜುಲೈ 5ರೊಳಗೆ ಶಾಲಾ ಶಿಕ್ಷಣ ಆಯುಕ್ತರಿಗೆ ಸಲ್ಲಿಸಬೇಕು.
ಒಂದು ವೇಳೆ ಶಿಕ್ಷಕರು ಮೂಲ ಶಾಲೆಗೆ ವಾಪಸಾಗದೆ ಇದ್ದಲ್ಲಿ ಅವರ ಹಾಜರಾತಿಯನ್ನು ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಿ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಅವರ ವೇತನವನ್ನು ತಡೆ ಹಿಡಿಯಬೇಕು ಎಂದು ನಿರ್ದೇಶನ ನೀಡಿದ್ದಾರೆ. ಶಿಕ್ಷಕರು ನಿಯೋಜನೆಯಿಂದ ವಾಪಸ್ ಮೂಲ ಸ್ಥಳಕ್ಕೆ ಬಾರದಿರುವುದು ಮತ್ತು ಇಂತಹ ಪ್ರಕರಣಗಳಲ್ಲಿ ಇಲಾಖೆಯ ಆದೇಶವಿದ್ದರೂ ಸಹ ಕ್ರಮ ಕೈಗೊಳ್ಳಲು ವಿಫಲವಾದ ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆಯುಕ್ತರು ಈ ಬೆಳವಣಿಗೆ ವಿಷಾದನೀಯವಾಗಿದೆ.
ಯಾವುದೇ ನಿಯೋಜನೆಯು ಶೈಕ್ಷಣಿಕ ಹಿತಾಸಕ್ತಿಗೆ ಪೂರಕವಾಗಿರಬೇಕೇ ಹೊರತು ಶಿಕ್ಷಕರ ವೈಯಕ್ತಿಕ ಹಿತಾಸಕ್ತಿಯಿಂದ ಮಾಡಬಾರದು ಎಂದು ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.