Wednesday, January 22, 2025

ಬಾಂಬೆ ಬಾಯ್ಸ್ ಹೇಳಿಕೆ ಬಗ್ಗೆ ಉಲ್ಟಾ ಹೊಡೆದ ಈಶ್ವರಪ್ಪ

ಶಿವಮೊಗ್ಗ :- ನಾನು ಹುಬ್ಬಳ್ಳಿಯಲ್ಲಿ ವಲಸಿಗ ಶಾಸಕರ ವಿರುದ್ದ ಬಾಂಬೆ ಬಾಯ್ಸ್ ಎಂದು ಪ್ರಸ್ತಾಪ ಮಾಡಿರಲಿಲ್ಲ ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇದೀಗ ಮಾಧ್ಯಮಗಳತ್ತ ಬೆರಳು ಮಾಡಿದ್ದಾರೆ.

ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ವಲಸಿಗ ಶಾಸಕರಿಂದಲೇ ನಮ್ಮ ಸರ್ಕಾರ ಬಂದಿದೆ ಎಂದು ಹೇಳುವ ಮೂಲಕ ವಲಸಿಗರ ವಿರುದ್ದ ಗುಡುಗಿರುವ ಕುರಿತು ಈಗ ಉಲ್ಟಾ ಹೊಡಿದಿದ್ದಾರೆ.

ಮಾಧ್ಯಮಗಳು ನಾನು ಹೇಳದೆ ಇರುವ ಅಂಶಗಳ ಬಗ್ಗೆ ಪ್ರಸ್ತಾಪಿಸಿದ್ದು ನನಗೆ ನೋವಾಗಿದೆ ಅಲ್ಲದೆ ಈ ಬೆಳವಣಿಗೆಯಿಂದ ವಲಸಿಗರಿಗೂ ಬೇಸರವಾಗಿದ್ದು,ಈಗ ಪಕ್ಷದಲ್ಲಿ ಗೊಂದಲ ಉಂಟಾದರೆ ಯಾರು ಹೊಣೆಗಾರರಾಗುತ್ತಾರೆ ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಮುಂಬರುವ ಲೋಕಸಭೆ,ತಾ.ಪಂ,ಜಿ.ಪಂ. ಚುನಾವಣೆಗಳ ಹಿನ್ನೆಲೆಯಲ್ಲಿ 28 ಕ್ಷೇತ್ರಗಳಲ್ಲೂ ಪಕ್ಷದ ವತಿಯಿಂದ 7 ತಂಡಗಳಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದ ಎರಡ್ಮೂರು ಜಿಲ್ಲೆಗಳ ಸಭೆಗಳಲ್ಲಿ ಗೊಂದಲವಾಗಿದೆ ಇದನ್ನು ಪಕ್ಷದ ವೇದಿಕೆಯಲ್ಲಿ ಸರಿಪಡಿಸಿಕೊಂಡು ಗ್ಯಾರಂಟಿಗಳ ಅನುಷ್ಠಾನದಲ್ಲಿ ವಿಫಲತೆ ಕಂಡು,ವಿದ್ಯುತ್ ದರ ಏರಿಸಿರುವ ರಾಜ್ಯ ಸರ್ಕಾರದ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಗ್ಯಾರೆಂಟಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗರಿಗಿಲ್ಲ : ಕಿಮ್ಮನೆ ರತ್ನಾಕರ್

ಜನರಿಗೆ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಕಾಂಗ್ರೆಸ್ ಹೇಳತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು.

ಜನಪರ ಆಡಳಿತ ನೀಡಲು ವಿಫಲವಾಗಿ,ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲಾಗದ ರಾಜ್ಯ ಸರ್ಕಾರ ವಿರುದ್ದ ಜುಲೈ 3ರಂದು ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಸದನದೊಳಗೂ ಹಾಗೂ ಹೊರಗೂ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದೆಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಅಶಿಸ್ತು ಬಿಜೆಪಿಗೂ ಕಾಲಿಟ್ಟಿದೆ ಎಂದು ಪುನರುಚ್ಚರಿಸಿದ ಅವರು ಮಾಜಿ ಸಚಿವ ಸಿ.ಟಿ.ರವಿ ಹಾಗೂ ಸಂಸದ ಪ್ರತಾಪ್ ಸಿಂಹ ಇಬ್ಬರೂ ಅಡ್ಜಸ್ಟ್ ಮೆಂಟ್ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಮತ್ತೊಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಗೊಂದಲಕಾರಿ ಹೇಳಿಕೆಗಳು ಹೊರಬರುತ್ತಿರುವುದು ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರಲ್ಲೂ ಗೊಂದಲವುಂಟಾಗಿ ಅಶಿಸ್ತು ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಸ್ವಪಕ್ಷದ ನಾಯಕರ ವಿರುದ್ದ ಬಹಿರಂಹವಾಗಿಯೇ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದರು.

ರೇಣುಕಾ ಚಾರ್ಯ ಹಾಗೂ ಶಾಸಕ ಯತ್ನಾಳ್ ಅವರಲ್ಲಿ ಪ್ರಾರ್ಥನೆ ಮಾಡಿ ಯಾವುದೇ ರೀತಿಯ ಗೊಂದಲಕಾರಿ ಹೇಳಿಕೆಗಳನ್ನು ನೀಡದಂತೆ ಮನವಿ ಮಾಡಿಕೊಳ್ಳುವೆ ಎಂದು ಈಶ್ವರಪ್ಪ ಹೇಳಿದರು.

ಪುತ್ರ ಕೆ.ಇ.ಕಾಂತೇಶ್ ಗೆ ಹಾವೇರಿಯ ಲೋಕಸಭಾ ಟಿಕೇಟ್ ನೀಡುವಂತೆ ಒತ್ತಾಯವಿದೆ ಇದರ ಬಗ್ಗೆ ಪಕ್ಷದ ನಾಯಕರು ತೀರ್ಮಾನಿಸುತ್ತಾರೆಂದು ಈಶ್ವರಪ್ಪ ನುಡಿದರು. ಶಿವಮೊಗ್ಗದಲ್ಲಿ ನಡೆದ ಗಲಾಟೆಯ ಕುರಿತು ನನಗೆ ಯಾವುದೇ ಸ್ಪಷ್ಠತೆಯಿಲ್ಲ ತಪ್ಪಿತಸ್ತರ ವಿರುದ್ದ ಕ್ರಮ ಕೈಗೊಳ್ಳುವಂತೆ ಎಸ್ ಪಿ ಅವರಿಗೆ ತಿಳಿಸಿದ್ದೇನೆ ಎಂದರು.

RELATED ARTICLES

Related Articles

TRENDING ARTICLES