ರಾಮನಗರ : ಈ ಹಿಂದೆ ನಾನು ಸಾಲಮನ್ನಾ ಮಾಡಿದಾಗ ದರೋಡೆ ಮಾಡಿ ಕೊಟ್ನಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕುಟುಕಿದರು.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 20 ಸಾವಿರ ಲೋಡ್ ಅಕ್ಕಿ ಕೊಡಲು ಗಿರಣಿ ಮಾಲೀಕರು ರೆಡಿ ಇದ್ದಾರೆ. ಆದರೆ, ಇವರಿಗೆ ಕಮಿಟ್ಮೆಂಟ್, ಪಾರದರ್ಶಕತೆ ಇಲ್ಲ ಎಂದು ಕೈ ವಿರುದ್ಧ ವಾಗ್ದಾಳಿ ನಡೆಸಿದರು.
ನನ್ನ ಪ್ರಕಾರ ಯೋಜನೆಗೆ ಹಣ ಒದಗಿಸಲು ಯಾವುದೇ ಪ್ರಾಬ್ಲಂ ಇಲ್ಲ. ದುಡ್ಡು ಎಲ್ಲಿಂದ ತರ್ತಾರೆ ಅಂತ ಬಿಜೆಪಿಯವ್ರು ಏನು ಬೇಕಾದರೂ ಹೇಳಬಹುದು. ನಾನು ಹಿಂದೆ ಸಾಲಮನ್ನಾ ಮಾಡ್ತಾಗ ದರೋಡೆ ಮಾಡಿ ಕೊಟ್ನಾ? ಜನರ ದುಡ್ಡನ್ನೇ ಕೊಟ್ಟಿದ್ದೀನಿ. ರಾಜ್ಯದ ಯೋಜನೆಗೂ ಯಾವುದಕ್ಕೂ ಹಣಕಾಸಿನ ಕೊರತೆ ಇಲ್ಲ. ಸರಿಯಾಗಿ ಮ್ಯಾನೇಜ್ಮೆಂಟ್ ಮಾಡಬೇಕು ಎಂದು ನಯವಾಗಿಯೇ ಸಿದ್ದರಾಮಯ್ಯಗೆ ಚಾಟಿ ಬೀಸಿದರು.
ಇದನ್ನೂ ಓದಿ : ಅಕ್ಕಿಗೆ ದುಡ್ಡು ಕೊಡೋದೆ ಆದ್ರೆ, ಐದು ಕೆಜಿಗೆ ಕೊಡ್ತಾರಾ? : ಅಶ್ವತ್ಥನಾರಾಯಣ
ಅಕ್ಕಿ ಕೊಡ್ತಾರೋ, ದುಡ್ಡು ಕೊಡ್ತಾರೋ?
5 ಕಿಲೋ ಅಕ್ಕಿ, ಉಳಿದ 5 ಕಿಲೋಗೆ ದುಡ್ಡು ನೀಡುವ ವಿಚಾರ ಕುರಿತು ಮಾತನಾಡಿ, ಅಕ್ಕಿ ಕೊಡ್ತಾರೋ, ದುಡ್ಡು ಕೊಡ್ತಾರೋ ಅದು ಅವರ ಹಣೆಬರಹ. ಯಾವ ರೀತಿ ಮಾಡಬೇಕು ಅಂತ ಕಾಂಗ್ರೆಸ್ ನವರೇ ತೀರ್ಮಾನ ಮಾಡಲಿ. ಚುನಾವಣೆಯಲ್ಲಿ ವೋಟು ಪಡೆಯಲು ತರಾತುರಿಯಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ರು. ಇದು ಅವರು ಮಾಡಿಕೊಂಡಿರೋ ಯಡವಟ್ಟು ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.
ದುಡ್ಡು ಮಧ್ಯವರ್ತಿಗಳ ‘ಕೈ‘ ಸೇರಲ್ವಾ?
ಮುಂದಾಗುವ ಅನಾಹುತಗಳ ಬಗ್ಗೆ ಯೋಚನೆ ಮಾಡದೇ ಗ್ಯಾರಂಟಿ ಘೋಷಣೆ ಮಾಡಿದ್ರು. 5 ಕಿಲೋ ಅಕ್ಕಿ ಬದಲು ದುಡ್ಡು ಕೊಡುವುದಾದ್ರೆ ಯಾವ ರೀತಿ ಕೊಡ್ತೀರಿ? ಯಾವ ರೀತಿ ಹಣ ತಲುಪಿಸ್ತೀರಿ? ಅದು ಮಧ್ಯವರ್ತಿಗಳ ಕೈ ಸೇರಲ್ವಾ? ಮುಂದೆ ಇದರ ಬಗ್ಗೆ ಮಾತನಾಡುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ಛೇಡಿಸಿದರು.