ಬೆಂಗಳೂರು : 5 ಕಿಲೋ ಅಕ್ಕಿ ಬದಲು ಪ್ರತಿ 1 ಕಿಲೋ ಅಕ್ಕಿಗೆ 34 ರೂಪಾಯಿ ಹಣ ನೀಡಲು ತೀರ್ಮಾನಿಸಲಾಗಿದೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಕ್ಕಿ ಸಿಗುವವರೆಗೆ ಪರ್ಯಾಯ ವ್ಯವಸ್ಥೆಯಾಗಿ ಹಣ ನೀಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಜುಲೈ 1ರಿಂದಲೇ ಪಡಿತರದಾರರ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಬಿಪಿಎಲ್ ಕಾರ್ಡ್ನಲ್ಲಿ ಹೆಸರಿರುವ ಪ್ರತಿಯೊಬ್ಬರಿಗೂ ಮಾಸಿಕ 170 ರೂ. ನೀಡಲಾಗುತ್ತದೆ. ಅಕ್ಕಿ ಸಿಕ್ಕ ಬಳಿಕ ಅನ್ನಭಾಗ್ಯ ಯೋಜನೆಯಡಿ 10 ಕಿಲೋ ನೀಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ ಗ್ಯಾರೆಂಟಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗರಿಗಿಲ್ಲ : ಕಿಮ್ಮನೆ ರತ್ನಾಕರ್
ಅಕ್ಕಿಗೆ 34 ರೂ. ಫಿಕ್ಸ್ ಮಾಡಿದ್ದಾರೆ
ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇತ್ತು. 31 ರೂ.ಗೆ ಓಪನ್ ಮಾರ್ಕೆಟಲ್ಲಿ ಮಾರಾಟ ಮಾಡಿದೆ. ಆದರೆ, ನಾವು 34 ರೂ. ಕೋಡ್ತಿವಿ ಅಂದ್ರೂ ಕೊಟ್ಟಿಲ್ಲ. ಎಫ್ ಸಿಐ(FCI) ಅವ್ರು 34 ರೂ. ಅಕ್ಕಿ ಫಿಕ್ಸ್ ಮಾಡಿದ್ದಾರೆ. ಈ ರೇಟಿಗೆ ಅಕ್ಕಿ ಕೊಡಲು ಯಾರು ಒಪ್ಪಿಲ್ಲ. ಅಕ್ಕಿ ದಾಸ್ತಾನು ಆಗೋ ತನಕ ಒಂದು ಕಿಲೋಗೆ 34 ರೂ. ದುಡ್ಡು ಕೊಡುತ್ತೇವೆ ಎಂದು ತಿಳಿಸಿದರು.
ಒಂದು ಕಾರ್ಡಿಗೆ ತಲಾ ಒಬ್ಬರಿಗೆ 5 ಕಿಲೋ ಅಕ್ಕಿ ಹಣ ನೀಡುತ್ತೇವೆ. ಮಾತು ಕೊಟ್ಟಂತೆ ಜುಲೈ 1ರಿಂದಲೇ ಹಣವನ್ನು ಕೊಡುತ್ತೇವೆ. ಒಂದು ತಿಂಗಳಿಗೆ 800 ಕೋಟಿ ರೂ. ಹಣ ಬೇಕಾಗುತ್ತದೆ. ಆದಷ್ಟು ಬೇಗ ಟೆಂಡರ್ ಮಾಡಿ ಅಕ್ಕಿಯನ್ನೇ ಮುಂದೆ ಕೊಡುತ್ತೇವೆ ಎಂದು ಸಚಿವ ಮುನಿಯಪ್ಪ ಮಾಹಿತಿ ನೀಡಿದರು.